ಸಮಾಜದ ಸೌಹಾರ್ದತೆ ಕುಗ್ಗುತ್ತಿದೆ: ಸಂತೋಷ್ ಹೆಗ್ಡೆ

ಬೆಂಗಳೂರು, ಆ.26: ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಸೌಹಾರ್ದತೆ ಕಡಿಮೆ ಆಗುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.
ರವಿವಾರ ನಗರದ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಭಾರತ ವಿಕಾಸ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ರಕ್ಷಾ ಬಂಧನ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾನವ ಜೀವಿಸಿರುವವರೆಗೆ ಅವನ ಬದುಕಿಗೆ ಒಂದು ಮೌಲ್ಯವಿರುತ್ತದೆ. ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಾಗರಿಕ ಜವಾಬ್ದಾರಿ ಯಾಗಿದ್ದು, ಮಕ್ಕಳಿಗೆ ಮೊದಲು ಮನೆಯಲ್ಲಿ ನಂತರ ಶಾಲೆ ಕಾಲೇಜುಗಳಲ್ಲಿ ಬಳಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ನುಡಿದರು.
ಸಂವಿಧಾನ ಬದ್ಧವಾಗಿ ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದರೂ, ವಾಸ್ತವ ಪರಿಸ್ಥಿತಿ ಜಾತ್ಯತೀತೆಯನ್ನು ಬೆಂಬಲಿಸುತ್ತಿಲ್ಲ ಎಂದ ಅವರು, ಇಂದು ದೇಶದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಧರ್ಮ, ಜಾತಿಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಇದರಿಂದ ದಿನೇ ದಿನೇ ಗೊಂದಲ ಹೆಚ್ಚುತ್ತಿದೆ ಎಂದರು.
ಶಾಂತಿ, ಮಾನವೀಯತೆ ಮೌಲ್ಯಗಳ ಕುರಿತು ಯುವ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇದುವರೆಗೂ 1,800 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಸಮಾಜದ ನ್ಯೂನತೆ ಕುರಿತು ಯುವ ಜನತೆಗೆ ತಿಳಿಸುತ್ತಿದ್ದು, ಮುಂದೆಯೂ ಸಹ ಈ ಕೆಲಸವನ್ನು ಮುಂದುವರೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್, ವಿದ್ಯಾಭವನ ನಿರ್ದೇಶಕ ಎಚ್.ಎಂ.ಸುರೇಶ್, ಡಾ.ಬಾಬು ಕೃಷ್ಣಮೂರ್ತಿ,ಸೇರಿ ಮತ್ತಿತರರು ಹಾಜರಿದ್ದರು.
ಈ ವೇಳೆ ಕರ್ನಾಟಕ ರಾಜ್ಯ ಅಂಧ ನೌಕರರ ಸಂಘದ ಸಹಾಯಕ ಪ್ರಾಧ್ಯಾಪಕ ರಮೇಶ್ ಸಂಕರೆಡ್ಡಿ, ರಾಜ್ಯ ಆಡಳಿತ ತರಬೇತಿ ಕೇಂದ್ರದ ವಿ.ಭಾಗ್ಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.







