21ನೆ ಶತಮಾನ ಹೋರಾಟವನ್ನು ನಾಶ ಮಾಡುವ ಶತಮಾನ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಆ.26: ಇಪ್ಪತ್ತನೆಯ ಶತಮಾನ ಜಾತಿ ವ್ಯವಸ್ಥೆ, ಜೀತ ಪದ್ಧತಿ, ಅಸಮಾನತೆ ವಿರುದ್ಧ ಹೋರಾಟ ಮಾಡುವ ಶತಮಾನವಾದರೆ, ಇಪ್ಪತ್ತೊಂದನೆಯ ಶತಮಾನ ಹೋರಾಟವನ್ನು ನಾಶಪಡಿಸುವ ಶತಮಾನ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ರವಿವಾರ ಅಂಜನನಗರದ ಸ್ಫೂರ್ತಿಧಾಮದಲ್ಲಿ 5ನೆ ಅಖಿಲ ಭಾರತ ಜಾತಿ ನಿರ್ಮೂಲನ ಆಂದೋಲನದ ಸಮಾವೇಶದಲ್ಲಿ 21ನೆ ಶತಮಾನದಲ್ಲಿ ಬದಲಾಗುತ್ತಿರುವ ಜಾತೀಯ ಗತಿಶೀಲತೆ ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಳ ಸಮುದಾಯಗಳು ಮೊದಲು ತಮ್ಮಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬೇಕು. ಆಮೇಲೆ ಜಾತಿ ನಿರ್ಮೂಲನೆ ಕಡೆಗೆ ಗಮ ಹರಿಸಬೇಕೆಂದು ಹೇಳಿದರು.
ಮೇಲ್ಜಾತಿಯವರು ಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿದ್ದು, ಅವರೆಲ್ಲರಿಗೂ ಎಲ್ಲ ರೀತಿಯ ಸೌಲಭ್ಯಗಳು ಸೀಗುತ್ತಿವೆ. ಆದರೆ, ಅಸಂಘಟಿತ ವಲಯದಲ್ಲಿರುವ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಯಾವುದೆ ಸೌಲಭ್ಯಗಳು ಸೀಗುತ್ತಿಲ್ಲ. ಈ ಸಮುದಾಯಗಳೂ ಒಗ್ಗಟ್ಟಾದರೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಿದೆ ಹಾಗೂ ಮೇಲ್ಜಾತಿಯವರಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಬಹುದೆಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ ಬಂದು ಹಲವು ದಶಕಗಳೆ ಕಳೆದರೂ ಮೂಲಭೂತವಾದಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಹೊಸದಿಲ್ಲಿಯಲ್ಲಿ ಸಂವಿಧಾನವನ್ನೆ ಸುಟ್ಟು ಹಾಕಿ ಸಂಭ್ರಮಿಸಿದರು. ಅಲ್ಲದೆ, ಸಂವಿಧಾನದಲ್ಲಿ ಜಾತ್ಯಾತೀತ ಪದವನ್ನೆ ಸೇರಿಸಬಾರದಾಗಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಈ ಎಲ್ಲ ಸಂಗತಿಯನ್ನು ನೋಡುತ್ತಿದ್ದರೆ ಜಾತಿವಾದಿಗಳು ಮತ್ತಷ್ಟು ಗಟ್ಟಿ ಆಗುತ್ತಿದ್ದಾರೆ ಎಂದು ಕಿಡಿಕಾರಿದರು.
ಇಪ್ಪತ್ತನೆ ಶತಮಾನದಲ್ಲಿ ಮಠದ ಸ್ವಾಮೀಜಿಗಳು ರಾಜಕಾರಣದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಆದರೆ, ಇಪ್ಪತ್ತನೆಯ ಶತಮಾನದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿ ಒಬ್ಬರು ನಮ್ಮ ಜಾತಿಯ ಸಿಎಂಗೆ ತೊಂದರೆ ನೀಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಬ್ಬ ಸ್ವಾಮೀಜಿ ಮಾಜಿ ಸಿಎಂ ಒಬ್ಬರನ್ನು ಕುರಿತು ಟಗರು ಹಿಂದೆ ಸರಿದಿದೆ ಎಂದರೆ ಅದು ಹೆದರಿದೆ ಎಂಬ ಅರ್ಥವಲ್ಲ ಮತ್ತೆ ಗುದ್ದಾಟಕ್ಕೆ ಸಜ್ಜಾಗುವ ಮುನ್ಸೂಚನೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ತರದ ಹೇಳಿಕೆಗಳನ್ನು ಗಮನಿಸುತ್ತಿದ್ದರೆ ಮಠಗಳು ಯಾವ ಧಿಕ್ಕಿನ ಕಡೆಗೆ ಹೊರಟಿವೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದು ನುಡಿದರು.
ದೇವರಾಜ ಅರಸು ಅವರು ಜಾತಿ ಗುರುತಿಸಿ ಜಾತಿ ಅಳಿಸಿ ಎನ್ನುತ್ತಿದ್ದರು. ಆದರೆ ಈಗ ಬಲಪಂಥಿಯ ವಿಚಾರವಾದಿಗಳು ಜಾತಿ ಉಳಿಸಿ ಜಾತಿ ಬೆಳೆಸಿ ಎನ್ನುತ್ತಿದ್ದಾರೆ. ಇಂತಹ ಜಾತಿ ಉಳಿಸಿ ವಿಚಾರಗಳು ಹೀಗೆಯೇ ಮುಂದುವರೆದುಕೊಂಡು ಹೋದರೆ ಜಾತಿವಾದಿ ಶಕ್ತಿಗಳು ದೇಶದಲ್ಲಿ ಮತ್ತೆ ವಿಜೃಂಭಿಸುತ್ತವೆ. ಅಲ್ಲದೆ, ದೇಶದಲ್ಲಿ 10 ಬಲಿಷ್ಠ ವಲಯಗಳಲ್ಲಿ ಹೆಚ್ಚಾಗಿ ಮೇಲ್ಜಾತಿಯವರೆ ಇದ್ದು, ಕೆಳ ಜಾತಿಯವರನ್ನು ಹುಡುಕುವುದು ಕಷ್ಟ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಾತಿ ನಿರ್ಮೂಲನಾ ಆಂದೋಲನ ಪ್ರಧಾನ ಕಾರ್ಯದರ್ಶಿ ಯು.ಸಾಂಬಶಿವರಾವ್, ಸಂಸ್ಕೃತಿ ಚಿಂತಕ ಅಲ್ಲಮಪ್ರಭು ಬೆಟ್ಟದೂರ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಸ್.ಮರಿಸ್ವಾಮಿ, ನವಯಾನ ಸಂಶೋಧನಾ ಕೇಂದ್ರದ ಗೌರವ ನಿರ್ದೇಶಕಿ ಡಾ.ಬಿ.ಯು.ಸುಮಾ, ಕಾರ್ಮಿಕ ಚಳುವಳಿಯ ಮುಖಂಡ ಪ್ರೊ.ಬಾಬು ಮ್ಯಾಥ್ಯೂ, ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ತುಹಿನ್‌ದೇವ್ ಉಪಸ್ಥಿತರಿ್ದರು.







