ಕೇರಳ ನೆರೆ: ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 5 ಇಳಿಕೆ

ಮುಂಬೈ, ಆ. 26: ಕೇರಳದ ಆರ್ಥಿಕತೆಯ ಪ್ರಧಾನ ಆಧಾರವಾಗಿರುವ ಪ್ರವಾಸೋದ್ಯಮ ಮುಂದಿನ ಅಕ್ಟೋಬರ್‌ನಲ್ಲಿ ಸುಧಾರಿಸದೇ ಇದ್ದರೆ, ಪ್ರವಾಸಿಗಳ ಸಂಖ್ಯೆ ಶೇ. 4ರಿಂದ 5 ಇಳಿಕೆಯಾಗಲಿದೆ. 1924ರಲ್ಲಿ ಸಂಭವಿಸಿದ ನೆರೆಯ ಬಳಿಕ ಇತ್ತೀಚೆಗೆ ರಾಜ್ಯ ವಿನಾಶಕಾರಿ ನೆರೆಗೆ ಸಿಲುಕಿಕೊಂಡಿತು. ಈ ನೆರೆಯಿಂದಾಗಿ 290 ಜನರು ಮೃತಪಟ್ಟು, 10 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣವನ್ನು ಆಗಸ್ಟ್ 16ರಿಂದ ಬಂದ್ ಮಾಡಲಾಗಿದೆ. ಆಗಸ್ಟ್ 29ರಂದು ತೆರೆಯುವ ಸಾಧ್ಯತೆ ಇದೆ. ರಾಜ್ಯದ ಪ್ರವಾಸೋದ್ಯಮದ ಬೇಡಿಕೆಯನ್ನು ಶೇ. 52ರಷ್ಟು ಪೂರೈಸುವ ಕೊಚ್ಚಿ ಹಾಗೂ ಎರ್ನಾಕುಲಂ ವಲಯ ಕಳೆದ ಎರಡು ವಾರಗಳ ಕಾಲ ಜಲಾವೃತವಾಗಿತ್ತು ಎಂದು ಕೇರ್ ರೇಟಿಂಗ್ ವರದಿ ಹೇಳಿದೆ. ‘‘ಮೊದಲ ಕಾಲು ವಾರ್ಷಿಕದಲ್ಲಿ ಪ್ರವಾಸೋದ್ಯಮ ಶೇ. 17ರಷ್ಟು ಬೆಳವಣಿಗೆಯಾಗಿತ್ತು. ಆದಾಗ್ಯೂ, ಎಪ್ರಿಲ್ ಹಾಗೂ ಮೇಯಲ್ಲಿ ನಿಪಾಹ್ ದಾಳಿಯಿಂದಾಗಿ ಪ್ರವಾಸಿಗರ ಸಂಖ್ಯೆ ಸೇ. 14 ಇಳಿಕೆಯಾಗಿತ್ತು.’’ ಎಂದು ಕೇರಳ ಪ್ರವಾಸೋದ್ಯಮ ನಿರ್ದೇಶಕ ಪಿ. ಬಾಲಾ ಕಿರಣ್ ತಿಳಿಸಿದ್ದಾರೆ.
ಭಾರೀ ನೆರೆಯಿಂದಾಗಿ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಪ್ರವಾಸಿಗಳ ಆಗಮನದ ಸಂಖ್ಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದ ರಾಜ್ಯದ ಪ್ರವಾಸೋದ್ಯಮದ ಮೇಲೆ ಪ್ರಭಾವ ಉಂಟಾಗಿತ್ತು. ಆದಾಗ್ಯೂ ಅಕ್ಟೋಬರ್‌ನಿಂದ ಗಮನಿಸಿದರೆ, ಪ್ರವಾಸೋದ್ಯಮ ಸ್ಪಲ್ಪ ಮಟ್ಟಿನ ಬೆಳವಣಿಗೆ ಆಗಲು ಆರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.





