ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ: ಶಾಸಕ ಪರಮೇಶ್ವರ ನಾಯ್ಕ

ದಾವಣಗೆರೆ, ಆ.26: ಸಮಾಜದ ರಕ್ಷಣೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದ್ದಾರೆ. ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದ ವತಿಯಿಂದ ಸಮಾಜದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ 2017-18 ನೇ ಸಾಲಿನ ಎಸೆಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಮೊದಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಮಾಜ ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮಸ್ಯೆಗಳು ಬಂದಾಗ ಅವುಗಳನ್ನು ನಿಭಾಯಿಸುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಸಮಾಜದಲ್ಲಿ ನಾಲ್ಕೈದು ಸಂಘಟನೆಗಳಿರುವುದರಿಂದ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ಎಲ್ಲವೂ ಒಂದೇ ವೇದಿಕೆಯಡಿ ಬರಬೇಕು ಎಂದರು.
ನಿವೃತ್ತ ನೌಕರರರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಜಂಜಾಟಗಳ ನಡುವೆ ಕೆಲಸ ಮಾಡಿರುತ್ತಾರೆ ನಿವೃತ್ತರಾದ ಮೇಲೆ ಅವರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅವರಿಗೆ ಸೂರ್ತಿದಾಯಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸಮಾಜ ಅತ್ಯಂತ ಹಿಂದುಳಿದಿದೆ. ನಮ್ಮ ಸಮಾಜ ಮುಖ್ಯವಾಹಿನಿಗೆ ಬರುವ ಅವಶ್ಯಕತೆ ಇದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಾಗಿದೆ.ದಿಲ್ಲಿಯಲ್ಲಿ ನಮ್ಮ ಸಮಾಜದ ಬೇಡಿಕೆಗಳ ಬಗ್ಗೆ ಮಾತನಾಡಲು ಕೇವಲ ಒಬ್ಬ ಸಂಸದರಿಲ್ಲ. ಇಂದಿಗೂ ಸಹ ಸಮಾಜ ನಿರ್ಲಕ್ಷಿತ ಜನಾಂಗವಾಗಿ ಸರಕಾರದ ಕಣ್ಣಲ್ಲಿ ಉಳಿದಿದೆ. ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಅವಶ್ಯಕತೆಯಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ಸರಕಾರವಿದ್ದಾಗ ಕ್ರಾಂತಿಕಾರಕ ಹೆಜ್ಜೆಯಿಟ್ಟಿದ್ದರು. ಈ ದೇಶವನ್ನು ಮೌಢ್ಯ ಬಹಳಷ್ಟು ಆವರಿಸುತ್ತಿದೆ. ಬಡ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಿಂದ ಬಡಜನರನ್ನು ಹೊರತರಬೇಕೆಂಬ ಉದ್ದೇಶದಿಂದ ಮೌಢ್ಯ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲಾಯಿತು. ಆದರೆ ಅದರಲ್ಲಿ ಕೆಲ ಅಂಶಗಳು ಜಾರಿಯಾಗದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಂಡಾಗಳು ಕಂದಾಯ ಗ್ರಾಮಗಳಾಗಬೇಕೆಂಬ ಕಾಯ್ದೆ ಬಂದರೂ ಸಹ ಸರಕಾರ ನಿರ್ಲಕ್ಷ ತೋರುತ್ತಿದೆ. ನಾಗರಿಕತೆ ಬೆಳೆದಂತೆಲ್ಲಾ ಜಾತಿ, ಕೌರ್ಯ ಸೃಷ್ಟಿಯಾಗುತ್ತಿದೆ. ನಾವು ನಿಜವಾದ ಗೋರಕ್ಷಕರು, ಕೃಷ್ಣನ ಆರಾಧಕರು ಆದರೆ ಕೃಷ್ಣನ ಹೆಸರಿನಲ್ಲಿ ಬೇರೆಯವರು ಟ್ರಸ್ಟ್‌ಗಳನ್ನು ಸ್ಥಾಪಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು. ಮಾಜಿ ಶಾಸಕರಾದ ಎಂ. ಬಸವರಾಜನಾಯ್ಕ, ಕೆ. ಶಿವಮೂರ್ತಿನಾಯ್ಕ, ಹೀರಾನಾಯ್ಕ, ಜಯ ದೇವನಾಯ್ಕ, ಡಾ.ರಾಜಾನಾಯ್ಕ, ಬೋಜನಾಯ್ಕ, ರಾಜಾನಾಯ್ಕ, ಜಿಪಂ ಸದಸ್ಯೆ ಗೀತಾ ಗಂಗಾಧರ ನಾಯ್ಕ, ಸುರೇಂದ್ರ ನಾಯ್ಕ ಇತರರು ಇದ್ದರು.







