ಸಂತ್ರಸ್ತರ ರಕ್ಷಣೆಗೆ ಬದ್ಧ: ಶಾಸಕ ಎನ್.ಎ.ಹಾರಿಸ್
ಬೆಂಗಳೂರು, ಆ.26: ಕೇರಳ ಮತ್ತು ಕೊಡಗಿನ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವೆಲ್ಲರೂ ಅವರ ರಕ್ಷಣೆಗೆ ಇದ್ದೇವೆ ಎಂದು ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಹೇಳಿದರು.
ರವಿವಾರ ನಗರದ ಅಗರವಾಲ್ ಫೌಂಡೇಶನ್‌ನಲ್ಲಿ ಓಣಂ ಮತ್ತು ರಕ್ಷಾಬಂಧನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಕೇರಳಕ್ಕೆ ಅಗತ್ಯ ವೈದ್ಯಕೀಯ ಸಲಕರಣೆಯೊಂದಿಗೆ ವೈದ್ಯಕೀಯ ಸಿಬ್ಬಂದಿ ತೆರಳಿ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.
ಕೇರಳದ ಯುವತಿಯರಿಂದ ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮಹಮದ್ ನಲಪಾಡ್‌ಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಣೆ ಮಾಡಲಾಯಿತು. ಕೇರಳ ಹಾಗೂ ಕೊಡಗು ಪ್ರವಾಹದಿಂದ ಸಾಕಷ್ಟು ಜನ ತೊಂದರೆಯಾಗಿದ್ದು, ಅಲ್ಲಿನ ಸಂತ್ರಸ್ತರಿಗೆ ಆಹಾರದ ಜತೆಗೆ ಸುಸಜ್ಜಿತವಾದ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿದೆ ಎಂದು ನಲಪಾಡ್ ಹೇಳಿದರು.
ಎಡಿಜಿಪಿ ಭಾಸ್ಕರ್ ಮಾತನಾಡಿ, ಕೊಡಗು ಮತ್ತು ಕೇರಳದಲ್ಲಿ ನೆರೆ ಪ್ರವಾಹ ಉಂಟಾಗಿರುವುದರಿಂದ ನಾವೆಲ್ಲರೂ ಒಂದಾಗಿ ಅವರಿಗೆ ಸಹಾಯ ಮಾಡಬೇಕು ಎಂದರು. ಡಾ.ಅಗರವಾಲ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುನೀತಾ ಅಗರವಾಲ್, ಆಸ್ಪತ್ರೆಯ ಸಿಬ್ಬಂದಿ ಹಾಗೂ ಕೇರಳದ ನರ್ಸ್‌ಗಳು ಪೊಲೀಸರಿಗೆ ಆರತಿ ಬೆಳಗಿ ರಾಖಿ ಕಟ್ಟಿದರು.





