ಕಟೀಲು ದೇವಸ್ಥಾನದಲ್ಲಿ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು, ಆ.27: ಕೊಂಡೆಮೂಲ ಗ್ರಾಮದ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪಂಪ್‌ಸೆಂಟ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರು ತಾಲೂಕಿನ ದೊಡ್ಡಕೊಪ್ಪ ನಿವಾಸಿ ಬಾಲಚಂದ್ರ ಕುಂಬಾರ (22), ಪುತ್ತೂರು ತಾಲೂಕಿನ ಬಜತ್ತೂರು ನಿವಾಸಿ ನಿತಿನ್ ಗೌಡ (21), ಕುಟ್ರುಪಾಡಿ ನಿವಾಸಿ ಅಶ್ವಿನ್ ಯು. ಗೌಡ (20) ಬಂಧಿತ ಆರೋಪಿಗಳು. ಬಂಧಿತರಿಂದ ಕಳವುಗೈದ ಎಲ್ಲ ಸೊತ್ತು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ
ಬಜ್ಪೆ ಠಾಣೆ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬೇಸಿಗೆ ಕಾಲದಲ್ಲಿ ಉಪಯೋಗಿಸಲ್ಪಡುವ ನೀರೆತ್ತುವ ಐದು ಪಂಪ್ ಸಬ್ ಮಾರ್ಸಿಬಲ್ ಪಂಪ್‌ಸೆಟ್ ಮತ್ತು ಇತರ ಪರಿಕರಗಳನ್ನು ಮಳೆಗಾಲ ಆರಂಭವಾಗುವ ವೇಳೆ ಕಳಚಿ ಆಫೀಸ್‌ನ ಮೇಲ್ಭಾಗದಲ್ಲಿ ತೆಗೆದಿರಿಸಲಾಗಿತ್ತು. ಆ.17ರಿಂದ 21ರ ಮಧ್ಯೆ ಕೊಠಡಿಯ ಬಾಗಿಲಿನ ಬೀಗ ಒಡೆದು ಎಲ್ಲ ಸೊತ್ತುಗಳನ್ನು ಕಳವುಗೈಯಲಾಗಿತ್ತು. ಈ ಕುರಿತು ಆ. 22ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಹಾಯಕ ಪೊಲೀಸ್ ಆಯುಕ್ತ ಪಣಂಬೂರು ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಬಜ್ಪೆ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಪಿಎಸ್ಸೈ ಶಂಕರ್ ನಾಯರಿ, ಎಚ್.ಸಿ. ಚಂದ್ರಮೋಹನ್, ಪಿಸಿಗಳಾದ ಭರತ್, ಪ್ರೇಮಾನಂದ, ಶಶಿಧರ್, ಮಂಜುನಾಥ ನಾಯಕ್, ಲಕ್ಷ್ಮಣ ಕಾಂಬ್ಳೆ ಪಾಲ್ಗೊಂಡಿದ್ದರು.







