ಭೂಮಿ ಹಕ್ಕುಪತ್ರದಲ್ಲಿ ಮಹಿಳೆಯ ಹೆಸರನ್ನು ಸೇರಿಸಬೇಕು: ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಆ.26: ಭೂಮಿ ಹಕ್ಕು ಪತ್ರದಲ್ಲಿ ಪುರುಷರಿಗೆ ನೀಡುವಷ್ಟು ಪ್ರಾದಾನ್ಯತೆಯನ್ನು ಮಹಿಳೆಗೂ ನೀಡಬೇಕು. ಮನೆಯ ಯಜಮಾನನ ಹೆಸರಿನ ಜತೆಗೆ ಕುಟುಂಬದ ಮಹಿಳೆಯ ಹೆಸರನ್ನೂ ಸೇರಿಸಬೇಕು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಿಸಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಮಹಿಳಾ ರೈತರ ಹಕ್ಕುಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಮಹಿಳಾ ಭೂಮಿ ಅಧಿಕಾರ’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರುಷನಿಗೆ ಸಮಾನವಾಗಿ ಮಹಿಳೆಯೂ ಆಸ್ತಿಯಲ್ಲಿ ಪಾಲುದಾರಳು ಎಂದು ತಿಳಿಸುವ ನಿಟ್ಟಿನಲ್ಲಿ ಹಾಗೂ ಅವರಿಗೆ ಆಸ್ತಿ ಹಕ್ಕು ಲಭಿಸುವುದಕ್ಕಾಗಿ ಆಸ್ತಿ ಪತ್ರದಲ್ಲಿ ಮಹಿಳೆ ಹೆಸರನ್ನು ಸೇರಿಸುವ ಅಗತ್ಯವಿದೆ ಎಂದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಬಹುತೇಕ ಕುಟುಂಬಗಳಲ್ಲಿ ಆಸ್ತಿಯ ಒಡೆತನ ಪುರುಷರ ಹೆಸರಿನಲ್ಲಿರುತ್ತದೆ. ಆದರೂ ಮನೆಯಲ್ಲಿರುವ ಮಹಿಳೆಯರು ಪುರುಷರಿಗೆ ಸಮಾನವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ಆಸ್ತಿಯ ಹಕ್ಕನ್ನು ನೀಡದೇ ವಂಚಿಸುವುದು ಎಷ್ಟು ಸರಿ. ಮಹಿಳೆಯರು ಕೇವಲ ದುಡಿಮೆಗೆ ಮಾತ್ರ ಸೀಮಿತವಾಗಬೇಕಾ ಎಂದು ಪ್ರಶ್ನಿಸಿದ ಅವರು, ಮಹಿಳೆಯೂ ಭೂಮಿ ಮೇಲೆ ಹಕ್ಕು ಸಾಧಿಸುವಂತಾಗಬೇಕು ಎಂದು ಹೇಳಿದರು.
ಮಹಿಳೆಯನ್ನು ಕೃಷಿ ಕುಟುಂಬದಲ್ಲಿ ದುಡಿಮೆಗಾಗಿ ಗುಲಾಮರ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕುಟುಂಬದ ಶೇ.90 ರಷ್ಟು ವಿಷಯಗಳಲ್ಲಿ ಇದುವರೆಗೂ ಯಾವುದೇ ಹಕ್ಕು ಸಿಕ್ಕಿಲ್ಲ. ಅಲ್ಲದೆ, ಕೃಷಿಯಲ್ಲಿ ಮಹಿಳೆ ಪ್ರಧಾನ ಪಾತ್ರ ವಹಿಸುತ್ತಿದ್ದರೂ ಅವರ ಹಕ್ಕಿನ ವಿಷಯ ಬಂದಾಗ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇದು ಅತ್ಯಂತ ಅಮಾನುಷವಾದುದು ಎಂದು ಬೇಸರ ವ್ಯಕ್ತಪಡಿಸಿದರು.
ಗೃಹ ಕೈಗಾರಿಕೆ, ಕರಕುಶಲಗಳಿಗೆ ಪ್ರೋತ್ಸಾಹ, ಒಂದಿಷ್ಟು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಎಲ್ಲವೂ ಮಹಿಳಾ ಅಭಿವೃದ್ಧಿ ಎಂದು ತೋರಿಸಲಾಗುತ್ತಿದೆ. ಆದರೆ, ನಿಜವಾದ ಅಭಿವೃದ್ಧಿ ಎಂದರೆ ಕುಟುಂಬದಲ್ಲಿ ಪುರುಷನೊಂದಿಗೆ ಸಮಾನವಾಗಿ ಮಹಿಳೆಯನ್ನು ಕಾಣುವುದು. ಅವರಿಗೆ ಎಲ್ಲ ರೀತಿಯ ಸ್ಥಾನಮಾನ ನೀಡುವುದು ಹಾಗೂ ಮಹಿಳೆಗೂ ಅಧಿಕಾರ ಸ್ಥಾನ ಕಲ್ಪಿಸುವುದು ನಿಜವಾದ ಮಹಿಳಾಭಿವೃದ್ಧಿಯಾಗುತ್ತದೆ ಎಂದರು.
ಮಹಿಳಾ ರೈತರಿಗೆ ಗುರುತಿನ ಚೀಟಿ ನೀಡಬೇಕು. ಕೃಷಿ ಸಾಲ, ಬೆಳೆ ವಿಮೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ಪ್ರಕೃತಿ ವಿಕೋಪಗಳಿಂದಾಗುವ ಅನಾಹುತಗಳಿಗೆ ನೀಡುವ ಪರಿಹಾರ ಸೇರಿದಂತೆ ಎಲ್ಲ ಯೋಜನೆಗಳಿಗೂ ಮಹಿಳೆಯರಿಗೆ ಪುರುಷರ ಸಮಾನವಾದ ಆದ್ಯತೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡು ಮಹಿಳೆಯರು ಮುನ್ನಡೆಸುತ್ತಿರುವ ರೈತ ಕುಟುಂಬಗಳಿಗೆ ಸಾಲ ನೀಡಬೇಕು. ಆರ್ಥಿಕ ಪುನರ್ವಸತಿ, ಮಕ್ಕಳ ಶಿಕ್ಷಣ, ವಸತಿ, ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ವಿವಿಧ ನೆರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರು ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಸರಕಾರ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ರಾಸಾಯನಿಕ ಮುಕ್ತ, ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಹೆಚ್ಚು ಉತ್ತೇಜಿಸುವ ಮೂಲಕ ಕೃಷಿ ಪದ್ಧತಿಯನ್ನು ಮರು ನಿರ್ಮಾಣ ಮಾಡಬೇಕಿದೆ. ಕೇರಳ ಸರಕಾರದ ಕುಟುಂಬಶ್ರೀ ಮಾದರಿಯಲ್ಲಿ ಭೂಮಿ ಗುತ್ತಿಗೆ ನೀಡಿ ಮಹಿಳಾ ಕೃಷಿಕರನ್ನು ಸಾಮುದಾಯಿಕ ಕೃಷಿ ಕಡೆಗೆ ಬೆಂಬಲಿಸಬೇಕು ಎಂದು ದೊರೆಸ್ವಾಮಿ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ವೀರಸಂಗಯ್ಯ, ವಿಧಾನಪರಿಷತ್ ಸದಸ್ಯ ಶರವಣ ಹಾಗೂ ಅನಸೂಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.







