ದ.ಕ. ಜಿಲ್ಲೆಯಲ್ಲಿ ರಕ್ತಪಾತ ಕೊನೆಗೊಳ್ಳಲಿ: ಡಾ.ಸಂಕಮಾರ್
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ಮಂಗಳೂರು, ಆ.27: ಬ್ರಹ್ಮಶ್ರೀ ನಾರಾಯಣ ಗುರುಗಳ ನಾಡು ದ.ಕ. ಜಿಲ್ಲೆಯಲ್ಲಿ ರಕ್ತಪಾತ ಕೊನೆಗೊಳ್ಳಬೇಕು ಎಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ತಿಳಿಸಿದ್ದಾರೆ.
ನಗರದ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಇನ್ನೂ ದೇವಸ್ಥಾನಗಳನ್ನು ಸ್ಥಾಪಿಸುವ ಅಗತ್ಯವಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ನಾರಾಯಣ ಗುರು ಹೇಳುವ ಮೂಲಕ ಜನರಿಗೆ ಸಂದೇಶ ನೀಡಿದರು. ಇಂದು ಲೋಕಕ್ಕೆ ನಾರಾಯಣ ಗುರುಗಳು ಕನ್ನಡಿಯಾಗಿದ್ದಾರೆ. ನಾರಾಯಣ ಗುರು ಅಂದು ಹುಟ್ಟಿ ಬಾರದಿದ್ದರೆ ಇವತ್ತಿನ ಕೇರಳ ಹಾಗೂ ದ.ಕ. ಪರಿಸ್ಥಿತಿ ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಲೂ ಕಷ್ಟವಾಗುತ್ತಿತ್ತು ಎಂದು ಹೇಳಿದರು.
ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೇರಳ ಹಾಗೂ ಕೊಡಗುಗಳನ್ನು ನೆನಪಿಸಿಕೊಂಡರೆ ಯಾವುದೂ ಶಾಶ್ವತವಲ್ಲ. ಆಸ್ತಿ, ಅಂತಸ್ತು, ಚಿನ್ನಾಭರಣ ಎಲ್ಲವನ್ನೂ ಬಿಟ್ಟು ಉಟ್ಟ ಬಟ್ಟೆಯಲ್ಲೇ ಪ್ರಾಣ ಉಳಿಸಿಕೊಳ್ಳಲು ಪರದಾಡಬೇಕಾಯಿತು. ಶಾಶ್ವತವಾಗಿರುವುದು ಕೇವಲ ವಿದ್ಯೆಯಾಗಿದೆ. ವಿದ್ಯೆಯಿಂದ ಸ್ವತಂತ್ರವಾಗಿ ಬದುಕಬಹುದಾಗಿದೆ. ವಿದ್ಯೆಗೆ ನಾರಾಯಣ ಗುರುಗಳು ಪ್ರಾಮುಖ್ಯತೆ ನೀಡಿದ್ದರು ಎಂದು ತಿಳಿಸಿದರು.
ಒಂದು ಮೂರ್ತಿಗೆ ಪೂಜೆ ಮಾಡಿ ವೈಭವೀಕರಿಸುವ ಸಂದರ್ಭ ಆ ವ್ಯಕ್ತಿಯ ತತ್ವ, ಸಿದ್ಧಾಂತಗಳನ್ನು ಮರೆತುಬಿಡುವ ಅಪಾಯ ಎದುರಾಗುತ್ತದೆ. ಅಂತಹ ಅಪಾಯದ ಅಡಿಯಲ್ಲಿ ಜನತೆಯಿದೆ. ಧರ್ಮ ಎನ್ನುವುದು ಭಜನೆ, ಮೆರವಣಿಗೆಯಲ್ಲ, ಬದಲಾಗಿ ಅದು ಎಲ್ಲ ಮನುಷ್ಯರ ಜೊತೆ ಮನುಷ್ಯತ್ವ ಇಟ್ಟುಕೊಂಡು ಪ್ರೀತಿಯಿಂದ ಬದುಕುವುದು ಮಾತ್ರ ನಿಜವಾದ ಧರ್ಮವಾಗಿದೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರ ಅಧಿಕೃತ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಣೆ ಪ್ರಾರಂಭಿಸಿತು. ಸಂವಿಧಾನ ಬದ್ಧವಾಗಿ ಆಚರಿಸಲು ನಾರಾಯಣ ಗುರು ಜಯಂತಿಗೆ ಸಾರ್ವತ್ರಿಕವಾದ ಮನ್ನಣೆ ದೊರೆತಿದೆ. ಇದಕ್ಕಾಗಿ ರಾಜ್ಯ ಸರಕಾರ ಅಭಿನಂದನೀಯ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ನಾರಾಯಣ ಗುರು ಬಗ್ಗೆ ಸಾವಿರಾರು ಪಿಎಚ್‌ಡಿ ಗ್ರಂಥಗಳು ಬಂದಿವೆ. ಈಗ ಮಂಗಳೂರು ವಿವಿಯಲ್ಲಿ 3 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಗೊಳಿಸಿರುವುದು ಆ ಮಹಾನ್ ವ್ಯಕ್ತಿಯ ಸೇವೆ ಎಂತಹದು ಎನ್ನುವುದು ತಿಳಿದು ಬರುತ್ತದೆ ಎಂದು ಅವರು ತಿಳಿಸಿದರು.
ನಮ್ಮನ್ನು ಸಿದ್ಧಾಂತಗಳು ಆಳಬೇಕು. ಸಿದ್ಧಾಂತಗಳ ಅಡಿಯಲ್ಲಿ ನಾರಾಯಣ ಗುರುಗಳು ಬದುಕಿದ್ದರು. ವಿದ್ಯೆಗೆ ಮಹತ್ವವನ್ನು ಕೊಟ್ಟು ಧರ್ಮವನ್ನು ಸಂಘಟನೆಗೆ ಪ್ರಾಧಾನ್ಯತೆ ಕೊಟ್ಟು ಸಂಘಟಿಸಿದರು. ಅವರು ಇನ್ನೊಂದು ಧರ್ಮವನ್ನು ಟೀಕಿಸಲಿಲ್ಲ. ಜಾತಿ, ಧರ್ಮ, ದೇವರು ಒಂದೇ ಎಂದು ಪ್ರತಿಪಾದಿಸಿ ನಾಡನ್ನು ಗಟ್ಟಿಗೊಳಿಸಿದರು ಎಂದು ತಿಳಿಸಿದರು.
ಜಾತಿ, ಧರ್ಮ, ಮತಗಳಿಂದ ಮಾನವ ಹೊರ ಬರಬೇಕು. ಮಾನವರು ವೈರತ್ವವನ್ನು ಬಿಟ್ಟು ಸ್ವತಂತ್ರವಾಗಿ ಬದುಕಲು ಕಲಿಯಬೇಕು. ಆ ಮೂಲಕ ಉದ್ಧಾರ ಆಗಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶಗಳು ಸಾರ್ವಕಾಲಿಕ. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸುಂದರ ಸಮಾಜ ನಿರ್ಮಾಣವಾಗಲಿದೆ. ನಾರಾಯಣ ಗುರುಗಳು ಎಲ್ಲ ವರ್ಗಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದರು. ಅಸ್ಪಶ್ಯತೆಯನ್ನು ಹೋಗಲಾಡಿಸಲು ನಾರಾಯಣ ಗುರುಗಳು ಅವಿರತವಾಗಿ ಶ್ರಮಿಸಿದರು ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಮಂಗಳೂರು ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್, ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಚಂದ್ರಶೇಖರ್ ಸುವರ್ಣ, ಮನಪಾ ಸದಸ್ಯರಾದ ಪ್ರತಿಭಾ ಕುಳಾಯಿ, ದೀಪಕ್ ಪೂಜಾರಿ, ರವಿಶಂಕರ ಮಿಜಾರು, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಚನಾ ಮತ್ತು ತಂಡ ಪ್ರಾರ್ಥಿಸಿತು. ದೇವಸ್ಥಾನ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಸ್ವಾಗತಿಸಿದರು. ದಿನೇಶ್ ಸುವರ್ಣ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ವಂದಿಸಿದರು.







