ಕಮಾಂಡೋ ಚಿತ್ರ ಬಿಡುಗಡೆ: ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶ

ಬೆಂಗಳೂರು, ಆ.27: ತಮಿಳಿನಿಂದ ಕನ್ನಡಕ್ಕೆ ಡಬ್ ಮಾಡಿರುವ ‘ಕಮಾಂಡೋ’ ಚಿತ್ರ ಬಿಡುಗಡೆ ವೇಳೆ ಚಿತ್ರಮಂದಿರಗಳ ಬಳಿ ಕಾನೂನು ಸುವ್ಯವಸ್ಥೆ ಉಲ್ಲಂಸುವವರ ವಿರುದ್ಧ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ನೀಡಿದೆ.
ಚಿತ್ರ ಬಿಡುಗಡೆ ವೇಳೆ ಪೊಲೀಸ್ ಭದ್ರತೆ ಒದಗಿಸಲು ನಿರ್ದೇಶಿಸುವಂತೆ ಕೋರಿ ಹರಿವು ಕ್ರಿಯೇಷನ್ಸ್‌ನ ಬಿ.ಎನ್. ರಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ, ಈ ಮಧ್ಯಂತರ ಆದೇಶ ನೀಡಿತು. ಜತೆಗೆ ಅರ್ಜಿ ಸಂಬಂಧ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಚಿತ್ರ ಬಿಡುಗಡೆ ಮಾಡುವ ಎಲ್ಲ ಚಿತ್ರಮಂದಿರಗಳಿಗೂ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಅರ್ಜಿದಾರರ ಪರ ವಕೀಲರ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಎಲ್ಲ ಚಿತ್ರಮಂದಿರಗಳಿಗೂ ಭದ್ರತೆ ಒದಗಿಸುವುದು ಕಷ್ಟಸಾಧ್ಯ. ಆದರೆ ಯಾವ ಚಿತ್ರಮಂದಿರಗಳ ಬಳಿ ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತದೆಯೋ ಆ ಚಿತ್ರಮಂದಿರಗಳ ವಿವರವನ್ನು ಅರ್ಜಿದಾರರು ಪೊಲೀಸರಿಗೆ ಒದಗಿಸಬೇಕು. ಪೊಲೀಸರು ಆ ವಿವರಗಳನ್ನು ಪರಿಶೀಲಿಸಿ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿತು.
ಪ್ರಕರಣವೇನು: ಅಜಿತ್, ವಿವೇಕ್ ಒಬೆರಾಯ್, ಕಾಜಲ್ ಅಗರವಾಲ್ ಹಾಗೂ ಇತರರು ಅಭಿನಯಿಸಿರುವ ತಮಿಳಿನ ‘ವಿವೇಗಂ’ ಚಿತ್ರವನ್ನು ‘ಕಮಾಂಡೋ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಮಾಡಲಾಗಿದೆ. ಆದರೆ ಡಬ್ಬಿಂಗ್ ಚಿತ್ರ ಬಿಡುಗಡೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಕೆಲ ಸಂಘಟನೆಗಳು ಬೆದರಿಕೆಯೊಡ್ಡಿವೆ. ಹೀಗಾಗಿ ಪೊಲೀಸ್ ಭದ್ರತೆ ಕೋರಿ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿದೆ.







