ಹನೂರು: ಕೊಡಗು ನೆರ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ

ಹನೂರು,ಆ.27: ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಜತೆಗೂಡಿ ಕೊಡಗು ಜಿಲ್ಲೆಯ ನೆರ ಸಂತ್ರಸ್ತರ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸಲಾಯಿತು.
ಮ.ಬೆಟ್ಟದ ಸಾಲೂರು ಮಠದ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಜತೆಗೂಡಿ ದೇಗುಲದ ಆವರಣದಿಂದ ಅಂತರಗಂಗೆ, ತಂಬಡಿಗೇರಿ ಬೀದಿ, ಅಂಗಡಿ ಮುಂಗಟ್ಟುಗಳ ಬೀದಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ದೇಣಿಗೆ ಸಂಗ್ರಹಿಸಿದರು.
ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದ ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ ಮಾತನಾಡಿ, ಕೊಡಗಿನಲ್ಲಾದ ಮಳೆಯಿಂದಾಗಿ ಅಲ್ಲಿನ ಜನರು ಪ್ರವಾಹಕ್ಕೆ ಸಿಲುಕಿ ಮನೆ, ಜಮೀನು, ಜಾನುವಾರುಗಳನ್ನು ಕಳೆದುಕೊಂಡಿದ್ದಾರಲ್ಲದೆ 17 ಮಂದಿ ಮೃತಪಟ್ಟಿದ್ದಾರೆ. ಇದರ ಜತೆಗೆ ರಸ್ತೆಗಳು ಹಾನಿಗೊಳಗಾಗಿದೆ. ಪರಿಣಾಮ ಇಲ್ಲಿನ ಜನರು ತೊಂದರೆಯನ್ನು ಅನುಭವಿಸುತ್ತಿದ್ದು, ನಿರಾಶ್ರಿತರ ತಾಣದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆಗಾಗಿ ಕೊಡಗು ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕಿದೆ. ಆದುದರಿಂದ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಸಂಗ್ರಹವಾದ ದೇಣಿಗೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ದೇಣಿಗೆ ಸಂಗ್ರಹಣದ ವೇಳೆ 55 ಸಾವಿರ ರೂ ಹಣ ಸಂಗ್ರಹವಾಯಿತು. ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಮಾದೇಶ್, ಜಿಪಂ ಮಾಜಿ ಸದಸ್ಯ ಈಶ್ವರ್ ಹಾಗೂ ಮ.ಬೆಟ್ಟದ ಸಾರ್ವಜನಿಕರು ಭಾಗವಹಿಸಿದ್ದರು.





