ಆ.31 ರಂದು ಚಿತ್ರಕಲಾ ಪ್ರದರ್ಶನ ಸಮಾರೋಪ: ಪ್ರದರ್ಶನದ ಹಣ ನೆರೆ ಸಂತ್ರಸ್ಥರಿಗೆ ದೇಣಿಗೆ
ಬೆಂಗಳೂರು, ಆ. 27: ಫರ್‌ಬೀ ಆರ್ಟಿಸ್ಟ್ ಗ್ರೂಫ್ ಸಂಸ್ಥೆ ವತಿಯಿಂದ ಏಳು ಅಂತರ್‌ರಾಷ್ಟ್ರೀಯ ಕಲಾವಿದರು ರಚಿಸಿರುವ ಕಲಾಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಆ.31 ರಂದು ಸಮಾರೋಪ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಚಿತ್ರ ಕಲಾವಿದ ಉಷಾ ಮಿಶ್ರಾ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ, ಜನರಲ್ಲಿ ಪ್ರಾಣಿಸಂಕುಲದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಮ್ಮ ತಂಡ ಏಳು ಕಲಾವಿದರು ರಚಿಸಿರುವ ಕಲಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಮೌಂಟ್ ಕಾರ್ಮಲ್ ಕಾಲೇಜ್ ಹತ್ತಿರದ ಬೆಂಗಳೂರು ಆರ್ಟ್ ಹೌಸ್ ಗ್ಯಾಲರಿಯಲ್ಲಿ ಪ್ರದರ್ಶನ ನಡೆಯುತ್ತಿದೆ ಎಂದು ಹೇಳಿದರು.
ಜೀವ ವೈವಿಧ್ಯತೆಯ ರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು. ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ 50 ಸಾವಿರಕ್ಕಿಂತಲೂ ಅಧಿಕ ಹುಲಿಗಳಿದ್ದವು. ಆದರೆ, 2014 ಹುಲಿ ಜನಗಣತಿ ಪ್ರಕಾರ 2226 ಹುಲಿಗಳು ದೇಶದಲ್ಲಿವೆ. ಕರ್ನಾಟಕದಲೇ 406 ಅಧಿಕ ಸಂಖ್ಯೆ ಹುಲಿಗಳಿದ್ದು, ಜೀವ ಸಂಕುಲ ದಿನದಿಂದ ದಿನಕ್ಕೆ ವಿನಾಶದ ಅಂಚಿಗೆ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಹಾರ ನಿಧಿಗೆ ದೇಣಿಗೆ: ನಮ್ಮ ಸಂಸ್ಥೆ ವತಿಯಿಂದ ಆ.18 ರಿಂದ ಹಮ್ಮಿಕೊಂಡಿರುವ ಚಿತ್ರಕಲಾ ಪ್ರದರ್ಶನದಲ್ಲಿ ಸಂಗ್ರಹವಾಗುವ ಹಣವನ್ನು ಕೊಡಗು ಮತ್ತು ಕೇರಳದ ನೆರೆ ಸಂತ್ರಸ್ಥರಿಗಾಗಿ ಕೊಡುಗೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.







