ನಕಲಿ ಫೇಸ್‍ಬುಕ್ ಖಾತೆ ತೆರೆದು ಮಹಿಳೆಯ ಅಶ್ಲೀಲ ಚಿತ್ರ ಅಪ್‍ಲೋಡ್: ಆರೋಪಿಯ ಬಂಧನ
ದಾವಣಗೆರೆ,ಆ.27: ನಕಲಿ ಫೇಸ್‍ಬುಕ್ ಖಾತೆ ತೆರೆದು ಅದರಲ್ಲಿ ಅಶ್ಲೀಲಚಿತ್ರ ಅಪ್‍ಲೋಡ್ ಮಾಡುವ ಜೊತೆಗೆ ಮಹಿಳೆ ಮೊಬೈಲ್ ನಂ. ಸಹ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಅಕೌಂಟ್ ತೆರೆದಿರುವ ಕುರಿತು ಜುಲೈ 19ರಂದು ಕೆಟಿಜೆ ನಗರದ ನಿವಾಸಿ ಮಹಿಳೆಯೊಬ್ಬರು ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರಯಲಾಗಿದೆ ಹಾಗೂ ಅಶ್ಲೀಲ ಫೋಟೋ ಅಪ್‍ಲೋಡ್ ಮಾಡಿ ಫೋನ್ ನಂಬರ್ ಸಹ ಹಾಕಿದ್ದಲ್ಲದೇ, ಅಶ್ಲೀಲ ಕಮೆಂಟ್ ಸಹ ಮಾಡಿದ್ದಾರೆ ಎಂದು ದೂರು ನೀಡಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಾವಣಗೆರೆಯ ಬಾಷಾ ನಗರ ಮುಖ್ಯರಸ್ತೆಯ ಫ್ರೆಂಡ್ಸ್ ಕಮ್ಯೂನಿಕೇಷನ್‍ನ ತನ್ವೀರ್ ಅಹಮದ್ ತಬೇರಿಜ್ ಬಂಧಿತ ಆರೋಪಿ. ಈತ ಮಹಿಳೆಯ ಮೇಲೆ ದ್ವೇಷವಿಟ್ಟುಕೊಂಡು ಆಕೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯ ಮುಖದ ಫೋಟೋವನ್ನು ಅಶ್ಲೀಲ ಚಿತ್ರಕ್ಕೆ ಜೋಡಿಸಿ ಅಶ್ಲೀಲವಾಗಿ ಕಮೆಂಟ್ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಈತನಿಂತ ಕೃತ್ಯಕ್ಕೆ ಬಳಸಿದ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದರು.
ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಸಿಇಎನ್ ಪೊಲೀಸ್ ಠಾಣೆ ಪಿಐ ದೇವರಾಜ್ ಹಾಗೂ ಸಿಬ್ಬಂದಿಗಳಾದ ರಾಮಚಂದ್ರಜಾದವ್, ಪ್ರಕಾಶ್, ರವಿ, ಸುರೇಶ್, ಸಚ್ಚಿನ್, ಲೋಹಿತ್, ವೀರಭದ್ರಪ್ಪ, ರಮೇಶ್ ಯಶಸ್ವಿಯಾಗಿದ್ದಾರೆ ಎಂದರು.