ಸಮನ್ವಯ ಸಮಿತಿ ಇರುವುದು ಸರ್ಕಾರ ಭದ್ರಪಡಿಸೋಕೆ, ಒಡೆಯುವುದಕ್ಕಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್

ಮೈಸೂರು,ಆ.27: ಸಮನ್ವಯ ಸಮಿತಿ ಇರುವುದು ಸರಕಾರ ಭದ್ರಪಡಿಸೋಕೆ, ಸರ್ಕಾರ ಒಡೆಯುವುದಕ್ಕಲ್ಲ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮನ್ವಯ ಸಮಿತಿ ತೀರ್ಮಾನಿಸಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಚಾಮರಾಜನಗರದಲ್ಲಿ ಹೇಳಿಕೆ ನೀಡಿದ್ದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿಕೆಗೆ ಗರಂ ಆದ ವಿಶ್ವನಾಥ್, ಸಮನ್ವಯ ಸಮಿತಿ ಇರುವುದು ಸರ್ಕಾರವನ್ನು ಭದ್ರ ಪಡಿಸೋಕೆ, ಒಡೆಯುವುದಕ್ಕಲ್ಲ. ಸಮನ್ವಯ ಸಮಿತಿಯಲ್ಲೇ ತೀರ್ಮಾನ ತೆಗೆದುಕೊಂಡರು ಮುಖ್ಯಮಂತ್ರಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಕೂಡಲೇ ಸಮನ್ವಯ ಸಮಿತಿ ಸಭೆ ಕರೆಯಬೇಕು, ಆ ಸಭೆಗೆ ನಾನು ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಪಾಲ್ಗೊಳ್ಳಬೇಕು, ಕೊಡಗಿನಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ. ಅಲ್ಲಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯವಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಯಾರೋ ಒಬ್ಬರು ತೀರ್ಮಾನ ಕೈಗೊಳ್ಳುವುದಲ್ಲ, ಸಮನ್ವಯ ಸಮಿತಿಯೇ ಬೇರೆ. ಸರ್ಕಾರದ ತೀರ್ಮಾನವೇ ಬೇರೆ. ಕಾಮನ್ ಮಿನಿಮಂ ಪ್ರೋಗ್ರಾಮ್ ಅಡಿಯಲ್ಲಿ ಸರಕಾರ ನಡೆಯುತ್ತಿದೆ ಎಂದು ತಿಳಿಸಿದರು.
ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್ ತಕ್ಕೆಗೆ ಬಂದಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವನಾಥ್, ನಿಮ್ಮನ್ನು ಉಪಮುಖ್ಯಮಂತಿ ಮಾಡಿದ್ದೂ ಜೆಡಿಎಸ್ ಎಂಬುದನ್ನು ಮರೆಯಬೇಡಿ. ಹಳೆಯದನ್ನು ನೆನಪಿಸಿಕೊಳ್ಳಿ ಎಂದ ಅವರು, ನಾವು ಮದುವೆ ಆಗಿದ್ದೇವೆ, ಹೆಚ್ಚೇನೂ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಕಷ್ಟ. ಸತ್ಯ ಹೇಳಬೇಕು. ಮೈತ್ರಿ ಸರ್ಕಾರ ಮೈತ್ರಿ ಸರ್ಕಾರವೆ. ಸ್ವತಂತ್ರ ಸರ್ಕಾರ ಸ್ವತಂತ್ರ ಸರ್ಕಾರವೆ. ಮೈತ್ರಿ ಸರ್ಕಾರ ಎಂದ ಮೇಲೆ ವ್ಯತ್ಯಾಸ ಇದ್ದೆ ಇರುತ್ತೆ ಎಂದರು.
ಮೈಸೂರು ಮಹಾನಗರ ಪಾಲಿಕೆ ಮೇಲ್ದರ್ಜೆಗೆ: ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಲಾಗುವುದು ಎಂದು ವಿಶ್ವನಾಥ್ ಭರವಸೆ ನೀಡಿದರು.
ಮೈಸೂರು ಸುತ್ತಲಿನ ಗ್ರಾಮಗಳಲ್ಲಿ ಹೆಸರಿಗೆ ಮಾತ್ರ ಹಳ್ಳಿಗಳಿವೆ. ಆದರೆ ಬಹುತೇಕ ಮೂಲಸೌಕರ್ಯಗಳನ್ನು ಮಹಾನಗರ ಪಾಲಿಕೆ, ಮುಡಾದಿಂದಲೇ ಒದಗಿಸಲಾಗುತ್ತಿದೆ. ಅವುಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ತಂದು ಬೃಹತ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಆದೇಶ, ಅನುದಾನ ತರುತ್ತೇವೆ ಎಂದರು. ಸಚಿವ ಜಿ.ಟಿ.ದೇವೇಗೌಡರ ಒತ್ತಾಸೆಯಂತೆ ಉಂಡವಾಡಿ ಕುಡಿಯುವ ನೀರು ಯೋಜನೆ ಜಾರಿಗೆ ಬರಲಿದೆ. ಸುಮಾರು 545 ಕೋಟಿ ರೂ. ವೆಚ್ಚದ ಯೋಜನೆ ಮೂಲಕ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿದ್ದೇವೆ. ಮೈಸೂರು ಹಿಂದೆ ದೇಶದ ನಂ.1 ಸ್ವಚ್ಛ ನಗರವಾಗಿತ್ತು. ಮತ್ತೆ ಸ್ವಚ್ಛ ನಗರ ಪ್ರಶಸ್ತಿ ಪಡೆಯಲು ಪ್ರಯತ್ನಿಸುತ್ತೇವೆ. ಆದ್ದರಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅವಕಾಶ ನೀಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್.ರಂಗಪ್ಪ, ಅಝೀಝ್ ಅಬ್ದುಲ್ಲಾ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.







