ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಧಾರೆಗಳು ತುಂಬಾ ಪ್ರಸ್ತುತ: ಮೈಸೂರು ಅಪರ ಜಿಲ್ಲಾಧಿಕಾರಿ
ಮೈಸೂರು,ಆ.27: ಅತ್ಯಾಧುನಿಕವಾದ ಜೀವನ ಶೈಲಿಗೆ ಬಹಳಷ್ಟು ನೆಮ್ಮದಿಯನ್ನು ಕೆಡಿಸಿಕೊಂಡಿರುವ ಜನರ ಮನಶಾಂತಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಧಾರೆಗಳು ತುಂಬಾ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಅರ್ಪಿಸುವುದರ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಋಗ್ವೇದದ ಒಂದು ಮಾತು ಯಾವಾಗಲೂ ನೆನಪಿನಲ್ಲಿರುವಂಥದ್ದು. ಉದಾತ್ತವಾದ ಚಿಂತನೆಗಳು, ಯಾವಾಗಲೂ ಯಾವುದೇ ಮೂಲದಲ್ಲಿರಲಿ ನಮಗೆ ಎಲ್ಲ ಕಡೆಗಳಿಂದ ಬರಲಿ ಎಂದು ದೇವರಲ್ಲಿ ಮಾಡುವಂಥದ್ದು. ಅಂದರೆ ಉದಾತ್ತ ಚಿಂತನೆಗಳನ್ನು ಹೊತ್ತಂತ ಯಾವುದೇ ವ್ಯಕ್ತಿ ಇರಬಹುದು, ಯಾವುದೇ ಜಾತಿಗೆ ಸೇರಿರಬಹುದು, ಯಾವ ಪ್ರದೇಶದವರೇ ಆಗಿರಬಹುದು, ಯಾವುದೇ ಭಾಷೆಯನ್ನು ಮಾತನಾಡುವವರಾಗಿರಬಹುದು ಅದನ್ನು ಭಾಷಾತೀತ, ಅಥವಾ ಜಾತಿಯಿಂದ ಅತೀತರಾದವರು ಅದಕ್ಕೆ ಎಲ್ಲೆ ಅನ್ನುವುದು ಇರುವುದಿಲ್ಲ ಎನ್ನುವುದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳೇ ಕಾರಣ ಎಂದರು.
ಅವರು ಮೈಸೂರಿನವರಲ್ಲ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದವರಲ್ಲ, ಆದಾಗ್ಯೂ ನಾವವರ ಉದಾತ್ತ ಚಿಂತನೆಗಳನ್ನು ಬೆಳೆಸಿಕೊಂಡವರು. ಎಲ್ಲವನ್ನೂ ಮೀರಿ, ಎಲ್ಲರನ್ನೂ ತಲುಪುವಂತಹ ಅವರ ವಿಚಾರಧಾರೆಗಳೆಲ್ಲ ಜಗತ್ಪ್ರಸಿದ್ಧವಾಗಿವೆ. ಬಹಳಷ್ಟು ಸಲ ಕೆಲವೊಬ್ಬರ ಬಗ್ಗೆ ಇಂಟರ ನೆಟ್ ನಲ್ಲಿ ಸರ್ಚ್ ಮಾಡಿದರೆ ಮಾಹಿತಿ ಸಿಗಲ್ಲ. ವೆಬ್ ಸೈಟ್ ನಲ್ಲಿ ನಾರಾಯಣ ಗುರುಗಳ ಬಗ್ಗೆ ಇದ್ದಷ್ಟು ವಿಚಾರಧಾರೆಗಳು ಮತ್ಯಾರದೂ ಸಿಗಲ್ಲ. ಅವರ ಕುರಿತು ಮೇಘಾಲಯದ ವೆಬ್ ಸೈಟ್ ನಲ್ಲಿ ಕೂಡ ಇದೆ. ಎಲ್ಲಿಯ ಮೇಘಾಲಯ ಎಲ್ಲಿಯ ಕೇರಳ. ಆದರೂ ಪ್ರತಿಯೊಬ್ಬರೂ ಇವತ್ತಿನ ಅತ್ಯಾಧುನಿಕವಾದ ಈ ಜೀವನಶೈಲಿಗೆ ಬಹಳಷ್ಟು ನೆಮ್ಮದಿಯನ್ನು ಕೆಡಿಸಿಕೊಂಡಿರುವ ಜನರ ಮನಶಾಂತಿಗೆ ಅವರ ವಿಚಾರಧಾರೆಗಳು ತುಂಬಾ ಪ್ರಸ್ತುತವೆಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಬಹಳಷ್ಟು ವ್ಯಕ್ತಿಗಳು ಇತಿಹಾಸಕ್ಕಷ್ಟೇ ಪ್ರಸ್ತುತವಾದರೆ. ಇವರು ಇಂದಿನ ಪ್ರಸ್ತುತ ಸ್ಥಿತಿಗೂ ಪ್ರಸ್ತುತರಾಗಿದ್ದಾರೆ.ಸಮಾಜದಲ್ಲಿದ್ದ ಜಾತಿ, ಅಸಮಾನತೆಯನ್ನು ಹೋಗಲಾಡಿಸಲು ಹೋರಾಟ ಮಾಡಿದವರಲ್ಲ. ಮನುಷ್ಯನ ಆಂತರಿಕ, ಬಾಹ್ಯ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಹಲವಾರು ವಿಚಾರಧಾರೆಗಳನ್ನು ಕೊಟ್ಟಿದ್ದಾರೆ. ಅವರ ದಿನನಿತ್ಯದ ಬದುಕು ಹೇಗಿತ್ತು ಎಂದು ನೋಡಿದರೆ ಪ್ರಾರ್ಥನೆ, ಊಟದ ಸಮಯ, ಯೋಗ ಇವೆಲ್ಲ ನೋಡಿದರೆ ನಮ್ಮಲ್ಲಿರುವ ಅನಾರೋಗ್ಯ ಸ್ಥಿತಿಯಿಂದ ಹೊರಬರಬಹುದು. ನಾವು ಮಧ್ಯರಾತ್ರಿ ಊಟ ಮಾಡಿ ಮಲಗುತ್ತೇವೆ. ಇದು ಆರೋಗ್ಯಕ್ಕೆ ಹಾನಿಕರ. ಅದಕ್ಕೆ ನಾರಾಯಣ ಗುರುಗಳ ದಿನನಿತ್ಯದ ಪದ್ಧತಿ ಪಾಲನೆ ಮಾಡಿದರೆ ಸಮಾಜದ 95% ಜನರು ಆರೋಗ್ಯವಾಗಿರುತ್ತಾರೆ. ಅಂತಹ ವಿಚಾರಧಾರೆ, ಒಳ್ಳೆಯ ಸಂದೇಶ ನೀಡಿದ್ದಾರೆ. ನಮ್ಮ ಬದುಕಿಗೆ ಬೇಕಾದ ಆಲೋಚನೆಗಳು, ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಜಯಂತಿಯ ಮೂಲಕ ಸಂಕಲ್ಪ ಮಾಡಿ ಮುಂದಿನ ಜಯಂತಿಯೊಳಗೆ ಗುರಿಯಾಗಿಟ್ಟುಕೊಂಡು ಪಾಲನೆ ಮಾಡಿ ಅವರ ಬದುಕಿಗೆ ಸಾರ್ಥಕತೆ ತಂದು ಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಂಗಾವತಿಯ ವಕೀಲ ನಾಗರಾಜು ಎಸ್.ಗುತ್ತೇದಾರ್ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ಪಾಲಿಕೆಯ ಆಯುಕ್ತ ಜಗದೀಶ್, ಮೂಡಾ ಆಯುಕ್ತ ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಂ.ಕೆ.ಪೋತರಾಜ್, ಸರೋಜಮ್ಮ, ರಾಜಶೇಖರ್ ಕದಂಬ, ತಹಶೀಲ್ದಾರ್ ರಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.