ಅತಿವೃಷ್ಠಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯಬೇಕು: ಮಾಜಿ ಪ್ರಧಾನಿ ದೇವೆಗೌಡ

ಹಾಸನ, ಆ.27: ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅತಿವೃಷ್ಠಿಯಿಂದ ಉಂಟಾಗಿರುವ ಭಾರೀ ಪ್ರಮಾಣದ ನಷ್ಟವನ್ನು ನಿಖರವಾಗಿ ಅಂದಾಜಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿದ ಅವರು ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದ್ದು, ಎಲ್ಲಾ ಸಂತ್ರಸ್ತರಿಗೂ ಸೂಕ್ತ ರೀತಿಯಲ್ಲಿ ಪರಿಹಾರ ದೊರೆಯಬೇಕು ಎಂದರು.
ಸಕಲೇಶಪುರ ತಾಲೂಕಿನ ಯಸಳೂರು ಹಾಗೂ ಹೆತ್ತೂರು ಹೊಬಳಿಗಳಲ್ಲಿ ಅಪಾರ ಪ್ರಮಾಣದ ಭೂಮಿ, ಬೆಳೆ, ರಸ್ತೆ, ಕಟ್ಟಡಗಳು ತೀವ್ರ ಸ್ವರೂಪದಲ್ಲಿ ಹಾನಿಗೀಡಾಗಿವೆ. ತಾನು ಅದನ್ನು ಕಣ್ಣಾರೆ ಕಂಡಿದ್ದು, ನಷ್ಟ ಅಂದಾಜಿಸುವಾಗ ಅಧಿಕಾರಿಗಳ ಮಾನವೀಯ ದೃಷ್ಠಿ ಹೊಂದಿರಬೇಕು ಎಂದರು.
ಹಲವೆಡೆ ಭೂಕುಸಿತದಿಂದ ಜಮೀನ ಮೇಲೆ ಮಣ್ಣು ಸಂಗ್ರಹವಾಗಿದೆ, ಕೆಲವೆಡೆ ಜಮೀನು ಕೊಚ್ಚಿ ಹೋಗಿದೆ, ಮಾಲಿಕರು ಮತ್ತೆ ಮೊದಲಿನಿಂದ ಬದುಕು ಕಟ್ಟಿಕೊಳ್ಳಬೇಕಾಗಿದೆ. ಹಾಗಾಗಿ ನಷ್ಟದ ಸಮೀಕ್ಷೆ ವೇಳೆ ಅಧಿಕಾರಿಗಳು ಎಲ್ಲಾ ರೀತಿಯ ಸಂಕಷ್ಟು ಹಾನಿಗಳನ್ನು ಅವಲೋಕಿಸಬೇಕು ಎಂದರು.
ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಡಿ ಅತೀ ಕಡಿಮೆ ಪ್ರಮಾಣದಲ್ಲಿ ಪರಿಹಾರ ಸಿಗುತ್ತದೆ. ಇದರ ಮಾರ್ಗಸೂಚಿ ದರಗಳನ್ನು ಬದಲಾಯಿಸಬೇಕಿದೆ. ಈ ಬಗ್ಗೆ ತಾವೂ ಕೂಡ ಪ್ರಧಾನಿಯವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ದೇವೇಗೌಡರು ಹೇಳಿದರು.
ಮಲೆನಾಡು ಭಾಗದಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುವಾಗ ಭೂ ಕುಸಿತದ ಅಪಾಯಗಳಿಗೆ ಮುಂಜಾಗ್ರತಾ ಕ್ರಮವಹಿಸರಬೇಕು. ಇದರಿಂದ ಅದಷ್ಟೋ ಮಟ್ಟಿಗೆ ಅನಾಹುತಗಳು ಕಡಿಮೆಯಾಗುತ್ತದೆ ಎಂದ ಅವರು, ರಾಮನಾಥಪುರದಲ್ಲಿ ಕಾವೇರಿ ನದಿ ನೀರಿನ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಬದಲಿ ನಿವೇಶನ ಒದಗಿಸಿ ಮನೆಗಳನ್ನು ಕಟ್ಟಿಕೊಡಬೇಕು ಹಾಗೂ ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮಾತನಾಡಿ, ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಬೇಲೂರು ಮತ್ತು ಆಲೂರು ತಾಲೂಕುಗಳಲ್ಲಿ 307ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಕೃಷಿ, ತೋಟಗಾರಿಕ, ಲೋಕೋಪಯೋಗಿ, ಸಣ್ಣ ನೀರಾವರಿ, ವಿವಿಧ ಇಲಾಖೆಗಳು ನಷ್ಟವನ್ನು ಅಂದಾಜಿಸಿವೆ. ತುರ್ತು ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 1044 ಮನೆಗಳು ಹಾನಿಗೀಡಾಗಿದೆ ಅದರಲ್ಲಿ 98 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 41 ಮನೆಗಳು ಶೇ 60ಕ್ಕೂ ಹೆಚ್ಚ ಭಾಗ ಹಾನಿಗೊಂಡಿವೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ 282.2 ಲಕ್ಷ ರೂಪಾಯಿ ಮನೆ ಹಾನಿಗೆ ಪರಿಹಾರ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಹವಾಲು ಅಲಿಕೆ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಪರಿಹಾರ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸಕಲೇಶಪುರ ನೆರೆ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಸಾಂತ್ವನ ಹಳಿದರು. ಭಾರೀ ಮಳೆಯಿಂದ ನಷ್ಟ ಅನುಭವಿಸುತ್ತಿರುವವರ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು.
ಪ್ರಧಾನಿ ಭೇಟಿಗೂ ಸಿದ್ದ: ಕೊಡಗು ಅತಿವೃಷ್ಠಿಯಿಂದ ಅಪಾರ ಹಾನಿ ಎದುರಿಸುತ್ತಿರುವ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ ತಾವು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇಯಲ್ಲಿ ಜಿಲ್ಲಾಧಿಕಾರಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರಿಗೆ ಪತ್ರಬರೆದು ಸ್ಥಳೀಯ ಸಮಸ್ಯೆಗಳನ್ನು ವಿವರಿಸಿ ನಂತರ ನೇರವಾಗಿ ಭೇಟಿ ಮಾಡಿ ಸಂಕಷ್ಟ ಪರಿಹಾರಕ್ಕೆ ಹೆಚ್ಚಿನ ನೆರವು ಒದಗಿಸಿವಂತೆ ಕೇಳುವುದಾಗಿ ಹೇಳಿದರು.







