ಲಲಿತ ಕಲೆಗಳ ಉಳಿವಿಗೆ ವಿ.ವಿಗಳಲ್ಲಿ ಪ್ರತ್ಯೇಕ ಅಧ್ಯಯನ ಪೀಠ ಸ್ಥಾಪನೆಯಾಗಬೇಕು: ವಿ.ಪರಿಷತ್ ಸದಸ್ಯ ರುದ್ರೇಗೌಡ

ಶಿವಮೊಗ್ಗ, ಆ. 27: 'ಲಲಿತ ಕಲೆಗಳನ್ನು ಉಳಿಸಿ ಬೆಳೆಸಲು, ರಾಜ್ಯದ ಪ್ರತಿಯೊಂದು ವಿಶ್ವವಿದ್ಯಾಲಗಲ್ಲಿ ಪ್ರತ್ಯೇಕ ಅಧ್ಯಯನ ಪೀಠ ತೆರೆಯಬೇಕು. ಸಂಶೋಧನೆಗಳು ನಡೆಸಬೇಕು. ಈ ಮೂಲಕ ಲಲಿತಾ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಸಬೇಕಾಗಿದೆ' ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಸಹಚೇತನ ನಾಟ್ಯಾಲಯ ಆಯೋಜಿಸಿದ್ದ ನಾಟ್ಯಾರಾಧಾನೆ-9 ಸಮಾರಂಭದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಲಲಿತ ಕಲೆಗಳಲ್ಲಿ ಚಿತ್ರಕಲೆ, ಶಿಲ್ಪಕಲೆ, ನಾಟಕ, ನೃತ್ಯದಂತಹ ಹತ್ತು ಹಲವು ಪ್ರಕಾರಗಳಿವೆ. ಇದೊಂದು ವಿಶಾಲ ಮಹಾಸಾಗರವಾಗಿದೆ. ಸಾವಿರಾರು ಕಲಾವಿದರಿದ್ದಾರೆ. ಶತಶತಮಾನಗಳಿಂದ ಈ ಕಲಾ ಪ್ರಕಾರಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ತಮ್ಮದೆ ಆದ ಮಹತ್ವ ಹೊಂದಿವೆ. ಜೊತೆಗೆ ನಮ್ಮ ಜೀವನದ ಹಾಸುಹೊಕ್ಕಾಗಿವೆ ಎಂದರು.
ಬದಲಾದ ಸನ್ನಿವೇಶದಲ್ಲಿ ಹಲವು ಲಲಿತ ಕಲಾ ಪ್ರಕಾರಗಳು ಅಳಿವಿನಂಚಿನಲ್ಲಿವೆ. ಕಲಾವಿದರಿಗೆ ಸೂಕ್ತ ಪ್ರೋತ್ಸಾಹ, ಆದ್ಯತೆ ಸಿಗುತ್ತಿಲ್ಲವಾಗಿದೆ. ಹೊಸ ಪೀಳಿಗೆಗೆ ಕೆಲ ಕಲಾ ಪ್ರಕಾರಗಳ ಪರಿಚಯವೇ ಇಲ್ಲವಾಗಿದೆ. ಈ ಕಾರಣದಿಂದ ಲಲಿತಾ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಸರ್ಕಾರಗಳು ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಕೇಂದ್ರಗಳಲ್ಲಿ ಈ ಕಲೆಗಳಿಗೆ ಆದ್ಯತೆ ಸಿಗಬೇಕಾಗಿದೆ. ಪ್ರತಿಯೊಂದು ವಿವಿಗಳಲ್ಲಿಯೂ ಪ್ರತ್ಯೇಕ ಅಧ್ಯಯನ ಕೇಂದ್ರ, ಪೀಠ ತೆರೆಯಬೇಕು. ಸಂಶೋಧನೆ, ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ಸಮಾರಂಭದ ವೇದಿಕೆಯಲ್ಲಿ ನೃತ್ಯ ಗುರು ಸಹನಾ ಚೇತನ್, ಶ್ರೀಗಂಧ ಸಂಸ್ಥೆಯ ಸಂಚಾಲಕ ಬಿ.ಆರ್.ಮಧುಸೂಧನ್, ಸಹಚೇತನಾ ನಾಟ್ಯಾಲಯದ ಎನ್.ಆರ್.ಪ್ರಕಾಶ್ ಆಚಿ ಸೇರಿದಂತೆ ಮೊದಲಾದವರಿದ್ದರು.







