ಮ್ಯಾನ್ಮಾರ್ ಸೇನಾಧಿಕಾರಿಗಳ ವಿರುದ್ಧ ಜನಾಂಗೀಯ ಹತ್ಯೆ ವಿಚಾರಣೆ
ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆ ಕರೆ

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಆ. 28: ರೊಹಿಂಗ್ಯಾ ಮುಸ್ಲಿಮರ ಜನಾಂಗೀಯ ಹತ್ಯೆ ನಡೆಸಿದ ಅಪರಾಧಕ್ಕಾಗಿ ಮ್ಯಾನ್ಮಾರ್ ಸೇನೆಯ ಉನ್ನತ ನಾಯಕರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ಉನ್ನತ ತನಿಖಾಧಿಕಾರಿಗಳು ಒತ್ತಾಯಿಸಿದ್ದಾರೆ.
ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಸಂಬಂಧಿಸಿ ಈಗಾಗಲೇ ವರದಿಯೊಂದನ್ನು ನೀಡಿರುವ ವಿಶ್ವಸಂಸ್ಥೆಯ ತನಿಖಾಧಿಕಾರಿಗಳ ತಂಡವು, ಸೇನಾಧಿಕಾರಿಗಳ ವಿರುದ್ಧ ವಿಚಾರಣೆಗೆ ಕರೆ ನೀಡುವ ಮೂಲಕ ತನ್ನ ಅಭಿಯಾನವನ್ನು ತೀವ್ರಗೊಳಿಸಲಿದೆ.
ಕಳೆದ ವರ್ಷದ ಆಗಸ್ಟ್ ಬಳಿಕ ಭುಗಿಲೆದ್ದ ರೊಹಿಂಗ್ಯಾ ವಿರೋಧಿ ಹಿಂಸಾಚಾರವನ್ನು ತಂಡವು ಬಲವಾಗಿ ಖಂಡಿಸಿದೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಿಂದ ಅಧಿಕಾರ ಪಡೆದುಕೊಂಡಿರುವ ಮೂವರು ಸದಸ್ಯರ ‘ಸತ್ಯ ಶೋಧನಾ ತಂಡ’ವು, ನೂರಾರು ರೊಹಿಂಗ್ಯಾ ಮುಸ್ಲಿಮರಿಂದ ಹೇಳಿಕೆಗಳನ್ನು ಪಡೆದುಕೊಂಡು, ಉಪಗ್ರಹ ಚಿತ್ರಗಳನ್ನು ಕಲೆ ಹಾಕಿ ಹಾಗೂ ಇತರ ಮಾಹಿತಿಗಳನ್ನು ಕಲೆ ಹಾಕಿ ವರದಿ ತಯಾರಿಸಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ರೊಹಿಂಗ್ಯಾ ಬಂಡುಕೋರರ ತಂಡವೊಂದು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿರುವ ಕೆಲವು ಸೇನೆ ಮತ್ತು ಪೊಲೀಸ್ ಹೊರಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ, ಮ್ಯಾನ್ಮಾರ್ ಸೇನೆಯು ಸಾಮಾನ್ಯ ರೊಹಿಂಗ್ಯಾ ಜನರ ವಿರುದ್ಧ ದಮನ ಕಾರ್ಯಾಚರಣೆ ನಡೆಸಿತ್ತು.
ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ರಖೈನ್ ರಾಜ್ಯದಿಂದ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಸೈನಿಕರಿಂದ ಭೀಭತ್ಸ ಕೃತ್ಯಗಳು...
ಮ್ಯಾನ್ಮಾರ್ ಸೈನಿಕರು ರೊಹಿಂಗ್ಯಾ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ, ನೂರಾರು ಗ್ರಾಮಗಳಿಗೆ ಬೆಂಕಿ ಕೊಟ್ಟಿದ್ದಾರೆ, ರೊಹಿಂಗ್ಯಾ ಮುಸ್ಲಿಮರನ್ನು ಗುಲಾಮಗಿರಿಗೆ ನೂಕಿದ್ದಾರೆ ಹಾಗೂ ಮಕ್ಕಳನ್ನು ಅವರ ಹೆತ್ತವರ ಸಮ್ಮುಖದಲ್ಲೇ ಕೊಂದಿದ್ದಾರೆ ಎಂದು ವಿಶ್ವಸಂಸ್ಥೆಯ ತಂಡವು ತನ್ನ ವರದಿಯಲ್ಲಿ ಆರೋಪಿಸಿದೆ.
ಸೇನಾ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 10,000 ರೊಹಿಂಗ್ಯಾ ಮುಸ್ಲಿಮರು ಹತರಾಗಿದ್ದಾರೆ ಎಂದು ವರದಿ ಹೇಳಿದೆ.
ಆದರೆ, ಈ ತಂಡಕ್ಕೆ ಮ್ಯಾನ್ಮಾರ್ ಪ್ರವೇಶವನ್ನು ನಿರಾಕರಿಸಲಾಗಿತ್ತು. ಮ್ಯಾನ್ಮಾರ್ ಸರಕಾರದಿಂದ ಸಹಕಾರ ಅಥವಾ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಅದು ಹೇಳಿದೆ.
ಅದೂ ಅಲ್ಲದೆ, ಮ್ಯಾನ್ಮಾರ್‌ನಲ್ಲಿನ ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂಬುದಾಗಿಯೂ ಮಾನವಹಕ್ಕುಗಳ ತಂಡ ಶಿಫಾರಸು ಮಾಡಿದೆ.







