ವಿಟ್ಲದಲ್ಲಿ ಈದ್ ಸೌಹಾರ್ದ ಕೂಟ: ಹಿರಿಯ ಆಟೊ ಚಾಲಕರಿಗೆ ಸನ್ಮಾನ ಕಾರ್ಯಕ್ರಮ

ಬಂಟ್ವಾಳ, ಆ. 28: ಜಮಾಅತೆ ಇಸ್ಲಾಮಿ ಹಿಂದ್ ವಿಟ್ಲ ಇದರ ವತಿಯಿಂದ ಇಲ್ಲಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಭಾ ಭವನದಲ್ಲಿ "ಈದ್ ಸೌಹಾರ್ದ ಕೂಟ" ಹಾಗೂ ಹಿರಿಯ ಆಟೊ ಚಾಲಕರಿಗೆ ಸನ್ಮಾನ ಕಾರ್ಯಕ್ರಮವು ರವಿವಾರ ಜರಗಿತು.
ಜಮಾತ್‍ನ ಮಂಗಳೂರು ವಲಯದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳು ಆಚರಣೆಗೆ ಮಾತ್ರ ಸೀಮಿತವಾಗಿರದೆ ಅದರ ಹಿಂದಿರುವ ಮೌಲ್ಯ ಮತ್ತು ಉದ್ದೇಶಗಳನ್ನು ಅರಿತುಕೊಂಡು ಆಚರಿಸಿದಾಗ ಮಾತ್ರ ಅವುಗಳು ನಿಜವಾದ ಹಬ್ಬಗಳೆನಿಸುತ್ತದೆ ಎಂದರು.
ವ್ಯಕ್ತಿಯ ಧಾರ್ಮಿಕತೆಯ ಮಾನದಂಡವು ಮಾತಾಪಿತರೊಂದಿಗೆ, ನೆರೆಹೊರೆಯವರೊಂದಿಗೆ, ಸಮಾಜದೊಂದಿಗೆ ಅವನ ಸಂಬಂಧ ಹೇಗಿದೆ ಎಂಬು ದಾಗಿದೆ. ಈ ಎಲ್ಲ ಮಜಲುಗಳಲ್ಲಿ ಅವನು ಒಳ್ಳೆಯವನಾಗಿದ್ದರೆ ಅದುವೇ ಅವನ ಮಾನವೀಯತೆಗಿರುವ ಪ್ರಮಾಣ ಪತ್ರ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಗೀತಾ ಪ್ರಕಾಶ್ ಮಾತನಾಡಿರು.
ವಿಟ್ಲ ಎಸ್ಸೈ ಯಲ್ಲಪ್ಪ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಎಸ್‍ಡಿಎಂಸಿ ಗೌರವಾಧ್ಯಕ್ಷ ಪಿ. ಸುಬ್ರಾಯ ಪೈ, ಶೋಕಮಾತೆ ಚರ್ಚ್‍ನ ಫಾದರ್ ಎರಿಕ್ ಕ್ರಾಸ್ತಾ, ಸಿಐಟಿಯು ರಾಮಣ್ಣ ವಿಠಲ, ಅನುಗ್ರಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷೆ ಯಾಸೀನ್ ಬೇಗ್, ವಿಟ್ಲ ಪಪಂ ಸದಸ್ಯ ಅಬ್ದುಲ್ ರಹ್ಮಾನ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.
ವಿಟ್ಲ ಪೇಟೆಯಲ್ಲಿ ಸುಮಾರು 35 ವರುಷಗಳಿಂದ ಆಟೊ ಚಾಲಕರಾಗಿ ದುಡಿಯುತ್ತಿರುವ 10 ಹಿರಿಯ ಚಾಲಕರಾದ ಕೋಟಿ ಪೂಜಾರಿ, ಐತಪ್ಪ ವಿ, ಬಾಬು, ಮೋಹನ, ಅಬ್ದುಲ್ ಖಾದರ್, ವಿಠಲ ಶೆಟ್ಟಿ, ವೀರಪ್ಪಗೌಡ, ಗೋಪಾಲ, ಇಸ್ಮಾಯಿಲ್, ಅಣ್ಣು ಕುಳಾಲ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಜ.ಇ.ಹಿಂದ್ ವಿಟ್ಲ ಅಧ್ಯಕ್ಷ ಹೈದರ್ ಅಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಇಬ್ರಾಹಿಂ ಸಈದ್ ಕಲ್ಲಂಗಳ ಕುರಾನ್ ಪಠಿಸಿದರು. ಹಾಜರ್ ಮತ್ತು ನಿಹ್ಲಾ ಸೌಹಾರ್ದ ಗೀತೆ ಹಾಡಿದರು. ಇರ್ಫಾನ್ ಕಲ್ಲಂಗಳ ಕಾರ್ಯಕ್ರಮ ನಿರೂಪಿಸಿದರು.







