ಮೊದಲ ವಿಶ್ವ ಯುದ್ಧದ ಜಾಗತಿಕ ಪರಿಣಾಮಗಳು

ಪ್ರಜಾತಂತ್ರವಾದಿಗಳು ಹಾಗೂ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಅವರ ದನಿಗಳನ್ನು ಅಡಗಿಸಲು, ಅನಿಲ ಚೇಂಬರುಗಳಿಗೆ ಹಾಕಿ ಕೊಲ್ಲಲು ಹಿಟ್ಲರ್ ರೂಪಿಸಿದ ಅತಿ ಕ್ರೂರ ಪರಿಕಲ್ಪನೆಯೇ ಕಾನ್ಸೆಂಟ್ರೇಶನ್ ಕ್ಯಾಂಪುಗಳು.
ಲಕ್ಷಾಂತರ ಜನರನ್ನು ಹಿಟ್ಲರ್ ಸಾಯಿಸಿದ. ಬಲಿಯಾದವರಲ್ಲಿ ಹೋರಾಟ ನಿರತ ಕಾರ್ಮಿಕರು, ಕಮ್ಯುನಿಷ್ಟರು, ಉದಾರವಾದಿ ಪ್ರಜಾತಂತ್ರವಾದಿಗಳೇ ಹೆಚ್ಚಿನವರು. ಫ್ಯಾಶಿಸ್ಟ್ ಸರ್ವಾಧಿಕಾರಿ ವ್ಯವಸ್ಥೆ ಬಂದರೆ ಯಾವ ಮಟ್ಟದ ಅಪಾಯ ಜನಸಾಮಾನ್ಯರಿಗೆ ಒಡ್ಡುತ್ತದೆ ಎನ್ನುವುದಕ್ಕೆ ಹಿಟ್ಲರ್ ಆಡಳಿತ ಒಳ್ಳೆಯ ಉದಾಹರಣೆಯಾಗಿದೆ.
ಮೊದಲ ವಿಶ್ವ ಯುದ್ಧ ಉಂಟು ಮಾಡಿದ ಜಾಗತಿಕ ಪರಿಣಾಮಗಳು ಅಗಾಧವಾದುದು. ಅದರಲ್ಲಿ ಮುಖ್ಯವಾದ ವಿದ್ಯಮಾನವೆಂದರೆ ವಿಶ್ವ ಯುದ್ಧವನ್ನು ಅಂತರ್ಯುದ್ಧವಾಗಿ ಪರಿವರ್ತಿಸಿ ರಶ್ಯದ ಬೊಲ್ಷೆವಿಕ್ ಪಕ್ಷದ (ಕಾರ್ಮಿಕ ವರ್ಗದ ಪಕ್ಷ) ನೇತೃತ್ವದಲ್ಲಿ ನಡೆದ ಸಮಾಜವಾದಿ ಕ್ರಾಂತಿ. ಇದು ಆರ್ಥಿಕ, ಸಾಮಾಜಿಕ, ರಾಜಕೀಯ, ವಿಜ್ಞಾನ, ಸಾಹಿತ್ಯ, ಕಲೆ, ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಜಾಗತಿಕ ಪ್ರಭಾವ ಮತ್ತು ಪರಿಣಾಮಗಳನ್ನು ಉಂಟುಮಾಡಿತು. ಕ್ರಾಂತಿಯ ನಂತರ ಸೋವಿಯತ್ ಒಕ್ಕೂಟ ನಿರ್ಮಿಸಿ ಜಾಗತಿಕವಾಗಿ ಆಯಕಟ್ಟಿನ ಪ್ರದೇಶದ ಮಾರುಕಟ್ಟೆಯನ್ನು ಸಮಾಜವಾದಿ ವ್ಯವಸ್ಥೆಯಡಿ ತಂದಿದ್ದು ಜಾಗತಿಕ ಬಂಡವಾಳಶಾಹಿ ಶಕ್ತಿಗಳಿಗೆ ನುಂಗಲಾಗದ ತುತ್ತಾಯಿತು. ಕಾರಣ ಆಯಕಟ್ಟಿನ ಬಲು ದೊಡ್ಡ ಭೂ ಪ್ರದೇಶದ ಹಿಡಿತ ತಪ್ಪಿಹೋಗಿದ್ದು ಒಂದು ಕಡೆಯಾದರೆ ತನ್ನ ಹಿತಾಸಕ್ತಿಗಳಿಗೆ ಸೆಡ್ಡು ಹೊಡೆದು ನಿಲ್ಲುವಂತಹ ಶಕ್ತಿಯೊಂದು ಉದಯವಾಗಿದ್ದು ಅವರನ್ನು ಹಲವು ರೀತಿಗಳಲ್ಲಿ ಚಿಂತಿಸುವಂತೆ ಮಾಡಿತ್ತು. ಆರ್ಥಿಕ, ರಾಜಕೀಯ, ಸಾಮಾಜಿಕ ಸಾಂಸ್ಕೃತಿಕವಾಗಿ ಜನರ ಪರ್ಯಾಯ ಸಿದ್ಧಾಂತವೊಂದು ಬೆಳೆದು ಸಾಬೀತಾಗಿ ನಿಂತಿತ್ತು ಇದಷ್ಟೇ ಅಲ್ಲದೆ ಜಗತ್ತಿನ ಹಲವು ಸಾಮ್ರಾಜ್ಯಗಳು ಅಂದರೆ ಜರ್ಮನಿ, ಒಟ್ಟೊಮನ್, ಆಸ್ಟ್ರೋ ಹಂಗೇರಿಯಾಗಳು ಕುಸಿದು ಹೋದವು. ಯುರೋಪ್ ಮತ್ತು ಮಧ್ಯ ಪ್ರಾಚ್ಯಗಳಲ್ಲಿ ಹಲವು ಹೊಸ ರಾಷ್ಟ್ರಗಳ ಉದಯಕ್ಕೆ ಕಾರಣವಾಯಿತು. ಜರ್ಮನಿ ಹಾಗೂ ಒಟ್ಟೋಮನ್‌ನ ಹಿಡಿತವಿದ್ದ ವಸಾಹತುಗಳನ್ನು ಬೇರೆ ಶಕ್ತಿಗಳಿಗೆ ಹಂಚಿಕೆ ಮಾಡಬೇಕಾಯಿತು. ಯುದ್ಧದ ನಂತರದ ಪುನರ್ರಚನೆಗಳ ಕೆಲಸಗಳಲ್ಲಿ ಅಮೆರಿಕ ಅಗ್ರ ಪಾಲು ಪಡೆಯಿತು. ಜರ್ಮನಿಯಲ್ಲಿ ಕ್ರಾಂತಿ ಆರಂಭವಾಯಿತು. ಇದು ಎಡ ಒಲವಿರುವ ವೇಮೆರ್ ಗಣರಾಜ್ಯ ರಚನೆಗೆ ಕಾರಣವಾಯಿತು.
1930ರವರೆಗೆ ಅಂದರೆ ನಾಝಿ ಶ್ರೇಷ್ಠತೆಯ ಪ್ರತಿಪಾದಕ ಅಡಾಲ್ಫ್ ಹಿಟ್ಲರ್ ಅಧಿಕಾರ ಪಡೆಯುವವರೆಗೆ ಇದು ಇತ್ತು. ಆಸ್ಟ್ರೋ ಹಂಗೇರಿಯಾ ಸಾಮ್ರಾಜ್ಯದ ಭಾಗಗಳು ಈ ಕಾಲದಲ್ಲಿ ಹಲವು ಸ್ವತಂತ್ರ ದೇಶಗಳಾಗಿ ರಚನೆಗೊಂಡವು. ಅವುಗಳಲ್ಲಿ ಜೆಕೋಸ್ಲಾವಕಿಯಾ, ಯುಗೋಸ್ಲಾವಿಯಾ, ಹಂಗೇರಿ ಮತ್ತು ಆಸ್ಟ್ರೀಯ ಮುಖ್ಯವಾದವುಗಳು. ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಸಿರಿಯ, ಫೆಲೆಸ್ತೀನ್‌ಗಳನ್ನು ಫ್ರಾನ್ಸ್ ಹಾಗೂ ಬ್ರಿಟನ್‌ಗಳು ತಮ್ಮ ಹಿಡಿತದಲ್ಲಿಟ್ಟುಕೊಂಡವು. ಒಂದು ದೊಡ್ಡ ಭಾಗ ಟರ್ಕಿ ಗಣರಾಜ್ಯವಾಗಿ ಉದಯಿಸಿತು. ಶಿಯಾ, ಸುನ್ನಿ, ಕುರ್ದ್ ಜನಾಂಗಗಳನ್ನು ಒಳಗೊಂಡ ಇರಾಕ್ ಅನ್ನೋ ದೇಶ ಮಧ್ಯ ಪ್ರಾಚ್ಯದಲ್ಲಿ ರಚನೆಯಾಗಿ, ಜರ್ಮನಿಯ ಭಾಗವಾಗಿದ್ದ ಪೋಲೆಂಡ್, ಡೆನ್ಮಾರ್ಕ್ ಸ್ವತಂತ್ರ ದೇಶಗಳಾದವು. ಸೆರ್ಬಿಯಾ, ಕ್ರೋಯೇಶಿಯಾ ಮತ್ತು ಸ್ಲೊವೇನಿಯಾ ಎಂಬ ಮೂರು ಬಾಲ್ಟಿಕ್ ಗಣರಾಜ್ಯಗಳ ಉದಯಕ್ಕೆ ಕಾರಣವಾಯಿತು. ಜರ್ಮನಿ, ಇಟಲಿ, ಜಪಾನ್‌ಗಳ ಹಿಡಿತದಲ್ಲಿದ್ದ ಹಲವಾರು ಪ್ರದೇಶಗಳು ಸ್ವತಂತ್ರ ರಾಷ್ಟ್ರಗಳಾಗಿ ರೂಪಿತಗೊಂಡವು. ಹಲವಾರು ದೇಶಗಳು ಚುನಾಯಿತ ಸರಕಾರಗಳನ್ನು ಅಸ್ತಿತ್ವಕ್ಕೆ ತಂದವು. ಇದೇ ಸಂದರ್ಭದಲ್ಲಿ ಜಗತ್ತಿನ ಹಲವಾರು ದೇಶಗಳಲ್ಲಿ ಸ್ವಾತಂತ್ರ್ಯಕ್ಕಾಗಿನ ಚಳವಳಿಗಳು ಸ್ಫೋಟಗೊಂಡು, ಭಾರತದಲ್ಲಿ ಸ್ವತಂತ್ರ ಹೋರಾಟ ತೀವ್ರ ಸ್ವರೂಪವನ್ನು ಪಡೆಯಲಾರಂಭಿಸಿತು.
ಮೊದಲ ವಿಶ್ವ ಯುದ್ಧ ಜರ್ಮನಿ ಮತ್ತದರ ಮಿತ್ರ ಸಾಮ್ರಾಜ್ಯಗಳ ಮೇಲೆ ಸೇನಾತ್ಮಕ, ಆರ್ಥಿಕ ಹಾಗೂ ರಾಜಕೀಯವಾಗಿ ಇನ್ನಿಲ್ಲದ ನಿರ್ಬಂಧಗಳನ್ನು ವಿಧಿಸಿದ್ದಲ್ಲದೆ ಯುದ್ಧ ಪರಿಹಾರವಾಗಿ ಅಗಾಧ ಮೊತ್ತವನ್ನು ನೀಡುವಂತೆ ಮಾಡಿತು. ಇದು ಆ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕ್ಷೋಭೆಗಳಿಗೆ ಬೀಳಲು ಕೊಡುಗೆ ನೀಡಿತು. ಅಮೆರಿಕ ಹೊರತು ಪಡಿಸಿದಂತೆ ಗ್ರೇಟ್ ಬ್ರಿಟನ್ ಮತ್ತದರ ಮಿತ್ರ ರಾಷ್ಟ್ರಗಳೂ ಕೂಡ ಬೃಹತ್ ಸಾಲಗಾರ ರಾಷ್ಟ್ರಗಳಾಗಿ ಮಾರ್ಪಟ್ಟವು. ಈ ಯುದ್ಧದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯಾಗಿದ್ದಲ್ಲದೆ, ಮಾರಕ ರಾಸಾಯನಿಕ ಅಸ್ತ್ರಗಳು ಕೂಡ ಬಳಕೆಯಾಯಿತು. ಹೊಸ ಯುದ್ಧ ತಂತ್ರಗಳು ರೂಪಿತಗೊಂಡವು. ಕೈಗಾರಿಕಾ ಕ್ರಾಂತಿ, ನಂತರದ ಫ್ರೆಂಚ್‌ಕ್ರಾಂತಿಯ ಬಳಿಕ ಜಾಗತಿಕವಾಗಿ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೆಯೇ ಭೌಗೋಳಿಕವಾಗಿ ಹಲವು ಮಹತ್ತರ ಬದಲಾವಣೆಗಳಿಗೆ ಮೊದಲ ವಿಶ್ವ ಯುದ್ಧ ಕಾರಣವಾಯಿತು.
ಅದರಲ್ಲಿ ‘ಲೀಗ್ ಆಫ್ ನೇಷನ್ಸ್’ ಎಂಬ ವಿಶ್ವ ಸಂಘಟನೆಯ ರಚನೆ ಕೂಡ ಒಂದು. ಇದಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನ ನೇತೃತ್ವ ನೀಡಿ ಜಾಗತಿಕವಾಗಿ ಮಾರುಕಟ್ಟೆ ಮತ್ತು ರಾಜಕೀಯದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಆರಂಭಿಸಿತು. ವಿಶ್ವಯುದ್ಧಗಳನ್ನು ತಡೆಯುವುದೇ ಈ ಸಂಘಟನೆಯ ಗುರಿ ಎಂದು ಸಾರಿ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಒಳಗೊಳಿಸಲು ಪ್ರಯತ್ನ ನಡೆಸಿತು. ಯುದ್ಧದಿಂದ ಬಸವಳಿದ ರಾಷ್ಟ್ರಗಳ ಜನರಿಗೂ ಇಂತಹ ಯುದ್ಧಗಳು ಮುಂದೆಂದೂ ನಡೆಯದೇ ಇರಲಿ ಎಂಬ ಬಯಕೆ ದಟ್ಟವಾಗಿರುವಂತಹ ಸಂದರ್ಭ ಬೇರೆ. ವಿಶ್ವ ಶಾಂತಿ ಮತ್ತು ಭದ್ರತೆಗಾಗಿ ಜಗತ್ತಿನ ಜನರು ಪರಿತಪಿಸುವಂತೆ ಮಾಡಿಟ್ಟಿತ್ತು ಈ ಯುದ್ಧ. ವೆರ್ಸೈಲ್ಸ್ ಒಪ್ಪಂದವನ್ನು ಜಾರಿಗೊಳಿಸುವ, ಇನ್ನಿತರ ಶಾಂತಿ ಒಪ್ಪಂದಗಳನ್ನು ಅನುಷ್ಠಾನಗೊಳಿಸುವ, ರಾಜತಾಂತ್ರಿಕವಾಗಿ ವಿವಾದಗಳನ್ನು ಬಗೆಹರಿಸುವ ಉದ್ದೇಶಗಳಿಂದ ಇದನ್ನು ಸಂಘಟಿಸಲಾಗಿದೆ ಎಂದು ಹೇಳಿಕೊಳ್ಳಲಾಯಿತು.
ಇದರ ಪರಿಕಲ್ಪನೆಯನ್ನು 1908ರಲ್ಲೇ ಫ್ರಾನ್ಸ್‌ನ ಶಾಂತಿಗಾಗಿನ ಮಧ್ಯವರ್ತಿ ಲಿಯಾನ್ ಬೂರ್ಷ್ವಾ ಎಂಬಾತ ತನ್ನ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದ. ಅಮೆರಿಕದ ಆಗಿನ ಅಧ್ಯಕ್ಷ ವೂಡ್ರೋ ವಿಲ್ಸನ್ ಈ ವಿಶ್ವ ಸಂಘಟನೆಯನ್ನು ಅಸ್ತಿತ್ವಕ್ಕೆ ತರುವಲ್ಲಿ ನಾಯಕತ್ವದ ಪಾತ್ರ ವಹಿಸಿದ್ದರು. ಇದು ವಿಶ್ವ ಮಟ್ಟದಲ್ಲಿ ರಾಷ್ಟ್ರಗಳ ಮೊದಲ ಸಂಘಟನೆಯಾಗಿ ಅಸ್ತಿತ್ವಕ್ಕೆ ಬಂದಿತು. ಆದರೆ ಇದರ ಬಗ್ಗೆ ಹಲವು ರಾಷ್ಟ್ರಗಳಿಗೆ ಅಸಮಾಧಾನ ಭುಗಿಲೇಳಲು ಬಹಳ ಕಾಲ ಹಿಡಿಯಲಿಲ್ಲ. ಮುಖ್ಯವಾಗಿ ಯುರೋಪಿನ ರಾಷ್ಟ್ರಗಳಿಗೆ ಇದು ತಮ್ಮ ಮೇಲಿನ ಸವಾರಿಯೆಂದು ಸಹಜವಾಗಿ ಅನಿಸತೊಡಗಿತು. ಅಮೆರಿಕ, ಬ್ರಿಟನ್‌ನಂತಹ ಬಲಿಷ್ಠ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ‘ಲೀಗ್ ಆಫ್ ನೇಷನ್ಸ್’ ಅನ್ನು ಹೇರುತ್ತಿವೆೆ. ತಮ್ಮ ಹಿತಾಸಕ್ತಿಗಳನ್ನು ದಮನಿಸಲಾಗುತ್ತಿದೆ ಎಂಬ ಭಾವನೆ ದಟ್ಟವಾಗತೊಡಗಿತು. ಇದಕ್ಕೆ ಮುಖ್ಯ ಕಾರಣ ವಿಶ್ವಮಾರುಕಟ್ಟೆಗಾಗಿನ ಪೈಪೋಟಿಯೇ ಆಗಿತ್ತು. ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಜಪಾನ್ ಕಾರ್ಯನಿರ್ವಾಹಕ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದವು.
ಈ ರಾಷ್ಟ್ರಗಳ ಒಪ್ಪಿಗೆ ಇಲ್ಲದೆ ಇತರ ರಾಷ್ಟ್ರಗಳು ಈ ಸಂಘಟನೆಯ ಸದಸ್ಯರಾಷ್ಟ್ರಗಳಾಗುವಂತಿರಲಿಲ್ಲ. ಇದರ ಜೊತೆಗೆ ಸಮಾಜವಾದಿ ರಾಷ್ಟ್ರಗಳ ವಿಸ್ತರಣೆಯನ್ನು ತಡೆಯುವ, ಸಮಾಜವಾದಿ ವ್ಯವಸ್ಥೆಯನ್ನು ಹಾಳುಮಾಡುವ ಮುಖ್ಯ ಉದ್ದೇಶಗಳೂ ಕೂಡ ಇದಕ್ಕಿದೆ ಎಂದು ಸೋವಿಯತ್ ರಶ್ಯಾ ನೇತೃತ್ವದ ಬಣದ ರಾಷ್ಟ್ರಗಳಿಗೆ ಅನಿಸತೊಡಗಿತು. ಅಮೆರಿಕ ನೇತೃತ್ವದ ಬಣವು ಬಂಡವಾಳಶಾಹಿ ಬಣವೆಂದು ಗುರುತಿಸಲ್ಪಟ್ಟಿತು. ಒಂದೆಡೆ ಯುದ್ಧಗಳನ್ನು ತಡೆಯುತ್ತಾ ವಿಶ್ವ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳನ್ನು ಅಮೆರಿಕ ನೇತೃತ್ವದ ಬಣ ನಿರಂತರವಾಗಿ ಮಾಡುತ್ತಿದ್ದರೂ ಹೆಚ್ಚುತ್ತಿದ್ದ ವೈರುಧ್ಯಗಳು ವಿಶ್ವವನ್ನು ಮತ್ತೊಂದು ವಿಶ್ವಯುದ್ಧದ ಕಡೆಗೆ ಕೊಂಡೊಯ್ಯತೊಡಗಿದ್ದವು. ಮೊದಲ ವಿಶ್ವಯುದ್ಧದ ನಂತರ ಹಾಳುಗೆಡವಲ್ಪಟ್ಟ ಹಲವು ದೇಶಗಳ ಪುನರ್ ನಿರ್ಮಾಣಗಳಲ್ಲಿನ ಸಿಂಹ ಪಾಲು ಅಮೆರಿಕ ಪಡೆದಿತ್ತು. ಇದು ಅದರ ಆರ್ಥಿಕತೆ ಹಾಗೂ ಪ್ರಭಾವಗಳು ಇನ್ನಷ್ಟು ಬೆಳೆಯಲು ಕಾರಣವಾಯಿತು. ಬಂಡವಾಳ ಕ್ರೋಡೀಕರಣಗೊಂಡಾಗ ಸಹಜವಾಗಿ ಅದು ಹೊಸ ಹೊಸ ಮಾರುಕಟ್ಟೆಯನ್ನು ಅರಸುತ್ತದೆ. ಈ ಅರಸುವಿಕೆ ಮತ್ತು ಹೂಡುವಿಕೆ ವೈರುಧ್ಯಗಳನ್ನು ಮತ್ತಷ್ಟು ತೀಕ್ಷ್ಣಗೊಳಿಸುತ್ತಾ ಹೋಗುತ್ತದೆ. ಶತ್ರುತ್ವವನ್ನು ಹೆಚ್ಚುಗೊಳಿಸುತ್ತದೆ. ಆಗ ವಿಶ್ವಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭವಾಗುತ್ತದೆ.
1930ರ ವೇಳೆಗೆ ಇದು ಮಹಾ ಆರ್ಥಿಕ ಕುಸಿತವಾಗಿ ಗೋಚರಿಸಲು ತೊಡಗುತ್ತದೆ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬರುತ್ತಾನೆ. ಈತ ನಾಝಿ ಜನಾಂಗೀಯ ಶ್ರೇಷ್ಠತೆಯನ್ನು ಪ್ರತಿಪಾದಿಸಿ ಫ್ಯಾಶಿಸಂ ಅನ್ನು ಜಾಗತಿಕ ಮಟ್ಟದಲ್ಲಿ ಹೇರಲು ಹೊರಟ ಸರ್ವಾಧಿಕಾರಿಯಾಗಿದ್ದ. ಇಂದು ಬಳಸಲ್ಪಡು ತ್ತಿರುವ ಈ ಪದ ವಿಶ್ವದಾದ್ಯಂತ ಚಾಲ್ತಿಗೆ ಬಂದಿದ್ದು ಆಗಲೇ. ಈತ ಜಗತ್ತನ್ನೇ ತನ್ನ ಮುಷ್ಟಿಯೊಳಗೆ ಬಂಧಿಸಿಡಲು ಪ್ರಯತ್ನ ಆರಂಭಿಸಿದ. ಯಾಕೆಂದರೆ ಅದು ಸಾಮಾಜಿಕ ಕ್ಷೋಭೆಯ ಕಾಲಘಟ್ಟ. ಅಸಮಾಧಾನ, ಅತೃಪ್ತಿ, ಆಕ್ರೋಶಗಳು ಭುಗಿಲೇಳುತ್ತಿದ್ದ ಕಾಲ. ಬೆಳೆದು ನಿಂತಿದ್ದ ಕಾರ್ಮಿಕ ವರ್ಗ ದೊಡ್ಡ ದೊಡ್ಡ ಹೋರಾಟಗಳಿಗೆ ಇಳಿದಿದ್ದವು.
ಮುಷ್ಕರಗಳು ದಿನನಿತ್ಯದ ಮಾತಾಗಿತ್ತು. ವ್ಯವಸ್ಥೆಯ ಬಗ್ಗೆ ಜನರಿಗೆ ಇದ್ದ ನಿರೀಕ್ಷೆಗಳೆಲ್ಲಾ ಹುಸಿಯಾಗಿ ನಿಂತಿದ್ದವು. ಜನರಿಂದ, ಜನರಿಗಾಗಿ, ಜನರೇ ಎಂಬೆಲ್ಲಾ ಬಣ್ಣದ ಮಾತುಗಳ ನಿಜ ರೂಪ ಜನರಿಗೆ ಅರ್ಥವಾಗತೊಡಗಿದ್ದವು. ದೊಡ್ಡ ದೊಡ್ಡ ಕಂಪೆನಿ ಮಾಲಕರು ತಮಗೆ ಬೇಕಾದಂತೆ ಅಧಿಕಾರದ ಅಂಗಗಳನ್ನು ವಶಪಡಿಸಿಕೊಂಡು ಜನಸಾಮಾನ್ಯರನ್ನು ವಂಚಿಸಲಾಗುತ್ತಿದೆ ಅನ್ನುವ ಅಭಿಪ್ರಾಯ ಜರ್ಮನಿ ಸೇರಿದಂತೆ ಯುರೋಪಿನ ಹಲವಾರು ದೇಶಗಳಲ್ಲಿ ಹೆಚ್ಚತೊಡಗಿತ್ತು. ಇಂತಹ ಪ್ರಕ್ಷುಬ್ಧ ವಾತಾವರಣವನ್ನು ಹಿಟ್ಲರ್ ನಿರಂಕುಶಾಧಿಕಾರ ಚಲಾಯಿಸಲ್ಪಡುವ ಫ್ಯಾಶಿಸ್ಟ್ ವ್ಯವಸ್ಥೆಯ ಹೇರಿಕೆಗೆ ಬಳಸಲು ಪ್ರಯತ್ನಿಸಿದ. ನಾಝಿ ಶ್ರೇಷ್ಠತೆಯನ್ನು ಪ್ರಚುರಪಡಿಸುತ್ತಾ ಜನಾಂಗೀಯ ದಮನಗಳಿಗೆ ಮುಂದಾದ. ಜನಸಾಮಾನ್ಯರ ಹಕ್ಕುಗಳಿಗೆ, ಸಂಘಟನೆ ಕಟ್ಟಿಕೊಳ್ಳುವ ಮತ್ತು ಪ್ರಶ್ನೆ ಮಾಡುವ ಅವಕಾಶಗಳಿಗೆ ಕತ್ತರಿ ಹಾಕಿ ಜನಸಾಮಾನ್ಯರ ಪ್ರಜಾತಾಂತ್ರಿಕ ಆಶೋತ್ತರಗಳನ್ನೆಲ್ಲಾ ದಮನಿಸಲು ಆರಂಭಿಸಿದ.
ಆಗಿನ ಪರಿಸ್ಥಿತಿಯನ್ನು ಮಾರ್ಟಿನ್ ನೆವ್ಯೂಲರ್ ಎಂಬ ಕ್ರಿಶ್ಚಿಯನ್ ಫಾಸ್ಟರ್ ಆ ಕಾಲದಲ್ಲಿ ಬರೆದ ಕವನ ಚೆನ್ನಾಗಿ ಪ್ರತಿಬಿಂಬಿಸುತ್ತದೆ.
ಮೊದಲವರು ಕಮ್ಯುನಿಸ್ಟರನ್ನು ಹುಡುಕಿ ಬಂದರು
ನಾನು ಮಾತಾಡಲಿಲ್ಲ.
ಯಾಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.
ನಂತರ ಅವರು ಕಾರ್ಮಿಕ ಸಂಘಟಕರನ್ನು ಹುಡುಕಿ ಬಂದರು.
ನಾನು ಮಾತಾಡಲಿಲ್ಲ.
ಯಾಕೆಂದರೆ ನಾನು ಕಾರ್ಮಿಕ ಸಂಘಟಕನಾಗಿರಲಿಲ್ಲ.
ನಂತರ ಅವರು ಯಹೂದಿಗಳನ್ನು ಹುಡುಕಿ ಬಂದರು
ನಾನು ಮಾತಾಡಲಿಲ್ಲ.
ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.
ನಂತರ ಅವರು ನನ್ನನ್ನೇ ಹುಡುಕಿ ಬಂದರು
ಆಗ ನನ್ನ ಪರವಾಗಿ ಮಾತಾಡಲು ಅಲ್ಲಿ ಯಾರೂ ಉಳಿದಿರಲಿಲ್ಲ.
ಇದನ್ನು ಬರೆದ ನೆಮ್ಯೂಲರ್‌ನನ್ನು ಕ್ರೂರ ಕಾನ್ಸೆಂಟ್ರೇಶನ್ ಕ್ಯಾಂಪಿನಲ್ಲಿ ಹಿಟ್ಲರ್ ಕೂಡಿಹಾಕಿದ. ಪ್ರಜಾತಂತ್ರವಾದಿಗಳು ಹಾಗೂ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಅವರ ದನಿಗಳನ್ನು ಅಡಗಿಸಲು, ಅನಿಲ ಚೇಂಬರುಗಳಿಗೆ ಹಾಕಿ ಕೊಲ್ಲಲು ಹಿಟ್ಲರ್ ರೂಪಿಸಿದ ಅತಿ ಕ್ರೂರ ಪರಿಕಲ್ಪನೆಯೇ ಈ ಕಾನ್ಸೆಂಟ್ರೇಶನ್ ಕ್ಯಾಂಪುಗಳು.
ಲಕ್ಷಾಂತರ ಜನರನ್ನು ಹಿಟ್ಲರ್ ಸಾಯಿಸಿದ. ಬಲಿಯಾದವರಲ್ಲಿ ಹೋರಾಟ ನಿರತ ಕಾರ್ಮಿಕರು, ಕಮ್ಯುನಿಷ್ಟರು, ಉದಾರವಾದಿ ಪ್ರಜಾತಂತ್ರವಾದಿಗಳೇ ಹೆಚ್ಚಿನವರು. ಫ್ಯಾಶಿಸ್ಟ್ ಸರ್ವಾಧಿಕಾರಿ ವ್ಯವಸ್ಥೆ ಬಂದರೆ ಯಾವ ಮಟ್ಟದ ಅಪಾಯ ಜನಸಾಮಾನ್ಯರಿಗೆ ಒಡ್ಡುತ್ತದೆ ಎನ್ನುವುದಕ್ಕೆ ಹಿಟ್ಲರ್ ಆಡಳಿತ ಒಳ್ಳೆಯ ಉದಾಹರಣೆಯಾಗಿದೆ.
ಇಂದು ಭಾರತವೂ ಸೇರಿದಂತೆ ಜಾಗತಿಕವಾಗಿ ಫ್ಯಾಶಿಸ್ಟ್ ವ್ಯವಸ್ಥೆಯ ಹೇರುವಿಕೆಗಳಾಗುತ್ತಿವೆ. ಜಾಗತಿಕವಾಗಿ ದಿನೇ ದಿನೇ ಗಂಭೀರವಾಗಿ ತೀವ್ರವಾಗುತ್ತಿರುವ ಆರ್ಥಿಕ ಸಂಕ್ಷೋಭೆಯಿಂದಾಗಿ ಆಳುವವರಿಗೆ ತಾವೇ ಹಿಂದೆ ಬಿಂಬಿಸಿಕೊಂಡಿದ್ದ ‘‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’’ ಎಂಬ ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನು ಕೂಡ ತಿರಸ್ಕರಿಸುತ್ತಿದ್ದಾರೆ. ಆ ಮುಸುಕನ್ನು ಹಾಕಿ ಜನಸಾಮಾನ್ಯರನ್ನು ನಂಬಿಸಿ ಯಾಮಾರಿಸಲು ಕೂಡ ಸಾಧ್ಯವಾಗದ ಹಂತವನ್ನು ಅವರು ತಲುಪಿ ಬಿಟ್ಟಿದ್ದಾರೆ. ಅದರ ಪರಿಣಾಮಗಳನ್ನು ನಾವು ಭಾರತದಲ್ಲೂ ಕಾಣುತ್ತಿದ್ದೇವೆ.







