ದಲಿತರ ಬಗೆಗಿನ ಈ ಕಾಳಜಿ ನಂಬಲರ್ಹವೇ?

ಅಧಿಕಾರಕ್ಕಾಗಿ ಹಾತೊರೆಯುವ ಪಾಸ್ವಾನ್‌ರಂತಹವರು ಅಂಬೇಡ್ಕರ್‌ರಿಗೆ ಬಾಯಿ ಮಾತಿನ ಗೌರವ ಸಲ್ಲಿಸುತ್ತಾ ಅಂಬೇಡ್ಕರ್ ಜಪ ಮಾಡುತ್ತಾ ಇರುತ್ತಾರೆ ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಹಾಗೂ ಹಿಂದೂ ಸಂಹಿತೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದವರು, ಈಗ ಪಾಸ್ವಾನ್ ಯಾರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೋ ಅದೇ ಬಿಜೆಪಿಯ ಮೂಲ ಸಂಘಟನೆಯಾಗಿದ್ದ ಆರೆಸ್ಸೆಸ್ ನಾಯಕರು ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ.
ನಿರೀಕ್ಷಣಾ ಜಾಮೀನಿನ ನಿಯಮವನ್ನು ಸೇರಿಸುವುದರ ಮೂಲಕ ಇತ್ತೀಚೆಗೆ ಮೊದಲು ದಲಿತ ದೌರ್ಜನ್ಯ ವಿರೋಧಿ ಕಾನೂನುಗಳನ್ನು ಸಡಿಲಗೊಳಿಸಲಾಯಿತು ಆ ಬಳಿಕ ಇದರ ವಿರುದ್ಧ ದೇಶಾದ್ಯಂತ ಉಗ್ರ ಪ್ರತಿಭಟನೆಗಳು ನಡೆದವು ಆ ಪ್ರತಿಭಟನೆಗಳಲ್ಲಿ ಈಗ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ದಲಿತ ವಿರೋಧಿ ನಿಲುವು ಸ್ಪಷ್ಟವಾಯಿತು. ಪ್ರತಿಭಟನೆಗಳ ಒತ್ತಡಕ್ಕೆ ಮಣಿದ ಸರಕಾರವು ಕಾನೂನಿನಲ್ಲಿ ಮೊದಲು ಇದ್ದ ನಿಯಮಗಳನ್ನು ಮರುಸ್ಥಾಪಿಸಲಿಕ್ಕಾಗಿ ಮಸೂದೆಯೊಂದನ್ನು ತರಲೇಬೇಕಾಯಿತು. ಕಳೆದ ಆಗಸ್ಟ್ ಆರರಂದು ಲೋಕಸಭೆಯು ಸರ್ವಾನುಮತದಿಂದ ಮಸೂದೆಯೊಂದನ್ನು ಅಂಗೀಕರಿಸಿ ದಲಿತ ದೌರ್ಜನ್ಯ ವಿರೋಧಿ ಕಾನೂನಿನಲ್ಲಿ ಸುಪ್ರೀಂ ಕೋರ್ಟ್ ಮಾಡಿದ ಬದಲಾವಣೆಗಳ ಪರಿಣಾಮಗಳು ಅನುಷ್ಠಾನಗೊಳ್ಳದಂತೆ ಮಾಡಿತು. ಎನ್‌ಡಿಎ ಸರಕಾರದ ಒಂದು ಭಾಗವಾಗಿರುವ ರಾಮ್‌ವಿಲಾಸ್ ಪಾಸ್ವಾನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು ಹಾಗೂ ಅದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ಕಾಂಗ್ರೆಸ್ ದಲಿತ ವಿರೋಧಿ ಎಂದು ಹೇಳುವುದಕ್ಕಾಗಿ ಕಾಂಗ್ರೆಸ್ ಅಂಬೇಡ್ಕರ್ ವಿರುದ್ಧ ಸ್ಪರ್ಧಿಸಿದ್ದ ಚುನಾವಣೆಗಳನ್ನು ಉದಾಹರಿಸಿದರು. ಆದರೆ ಅಂಬೇಡ್ಕರ್ ಸಿದ್ಧಾಂತಕ್ಕೆ ಪಾಸ್ವಾನ್‌ರವರ ಬದ್ಧತೆ ನಿಷ್ಠೆಯೇ ಶಂಕಾಸ್ಪದವಾಗಿದೆ. ಅವರೇ ಈಗ ಹಿಂದೂ ರಾಷ್ಟ್ರದ ಅಜೆಂಡಾ ಹೊಂದಿರುವ ಬಿಜೆಪಿಯ ಮಿತ್ರನಾಗಿದ್ದಾರೆ. ಸಾಮಾಜಿಕ ನ್ಯಾಯ, ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಪ್ರತಿಪಾದಕರಾಗಿದ್ದ ಅಂಬೇಡ್ಕರ್ ಹಿಂದೂ ರಾಷ್ಟ್ರದ ಉಗ್ರ ಟೀಕಾಕಾರರಾಗಿದ್ದರು.
ಪಾಸ್ವಾನ್ ಅವರನ್ನು ಮೌಸಮ್ ವೈಜ್ಞಾನಿಕ್ (ಹವಾಮಾನ ಮುನ್ಸೂಚನೆ ನೀಡುವ ವಿಜ್ಞಾನಿ) ಎಂದು ಸರಿಯಾಗಿಯೇ ಕರೆಯಲಾಗಿದೆ. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಅವರು ಯಾವಾಗಲೂ ತನಗೆ ಬೇಕಾದ ಕಡೆಗೆ ವಾಲುತ್ತಾ ತಿರುಗುತ್ತಾ ಸೈದ್ಧಾಂತಿಕ ರಾಜಿಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರದೇ ಆದ ಸಿದ್ಧಾಂತವೆಂದರೆ ಅಧಿಕಾರ ದಾಹ. ಆದ್ದರಿಂದ ಚುನಾವಣಾ ಲೆಕ್ಕಾಚಾರಗಳ ಹೊರತಾಗಿ ಅವರ ಮಾತುಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿರುವುದಿಲ್ಲ. ಅಂಬೇಡ್ಕರ್ ಮತ್ತು ಕಾಂಗ್ರೆಸ್ ನಡುವಣ ಚುನಾವಣಾ ಯುದ್ಧದ ಅವರ ಉಲ್ಲೇಖವು, ಕಾಂಗ್ರೆಸ್ ಮತ್ತು ಅಂಬೇಡ್ಕರ್ ನಡುವಣ ಸಂಬಂಧದ ನಿಜವಾದ ವಿವರಣೆಯಲ್ಲ. ಅಂಬೇಡ್ಕರ್ ಯಾವತ್ತೂ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರಲಿಲ್ಲವೆಂಬುದನ್ನು ಪಾಸ್ವಾನ್ ಮರೆತು ಮಾತಾಡುತ್ತಾರೆ. ಅಲ್ಲದೆ ಅದೇ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಭಾರತದ ಮೊತ್ತ ಮೊದಲ ಸಚಿವ ಸಂಪುಟದಲ್ಲಿ ಅವರು ಸಚಿವರಾಗಿದ್ದಷ್ಟೇ ಅಲ್ಲ; ಭಾರತದ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಕೂಡ ಅವರನ್ನೇ ಆಯ್ಕೆ ಮಾಡಲಾಗಿತ್ತು. ಹಾಗೆಯೇ ಲಿಂಗ ಸಮಾನತೆಯ ಸಮಾಜದೆಡೆಗೆ ಇಟ್ಟ ಬಹಳ ಮುಖ್ಯವಾದ ಒಂದು ಹೆಜ್ಜೆಯಾಗಿದ್ದ ಹಿಂದೂ ಕೋಡ್ ಮಸೂದೆಯ ಕರಡನ್ನು ಸಿದ್ಧಪಡಿಸುವಂತೆ ಕೂಡ ಕಾಂಗ್ರೆಸ್ ಸರಕಾರ ವಿನಂತಿಸಿದ್ದು ಅಂಬೇಡ್ಕರ್‌ರನ್ನೇ. ಇದನ್ನೆಲ್ಲ ಮರೆತು ಪಾಸ್ವಾನ್ ಮಾತಾಡುತ್ತಾರೆ.
ಅಧಿಕಾರಕ್ಕಾಗಿ ಹಾತೊರೆಯುವ ಪಾಸ್ವಾನ್‌ರಂತಹವರು ಅಂಬೇಡ್ಕರ್‌ರಿಗೆ ಬಾಯಿ ಮಾತಿನ ಗೌರವ ಸಲ್ಲಿಸುತ್ತಾ ಅಂಬೇಡ್ಕರ್ ಜಪ ಮಾಡುತ್ತಾ ಇರುತ್ತಾರೆ ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಹಾಗೂ ಹಿಂದೂ ಸಂಹಿತೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದವರು. ಈಗ ಪಾಸ್ವಾನ್ ಯಾರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೋ ಅದೇ ಬಿಜೆಪಿಯ ಮೂಲ ಸಂಘಟನೆಯಾಗಿದ್ದ ಆರೆಸ್ಸೆಸ್ ನಾಯಕರು ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ. ಪಾಸ್ವಾನ್‌ರ ಮಿತ್ರ ಪಕ್ಷವಾಗಿರುವ ಬಿಜೆಪಿಯ ಹಿಂದೂ ರಾಷ್ಟ್ರದ ಅಜೆಂಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸತತವಾಗಿ ವಿರೋಧಿಸಿದ್ದ ಅಜೆಂಡಾ ಎಂಬುದನ್ನೂ ಪಾಸ್ವಾನ್ ಮರೆಯುತ್ತಾರೆ. ಭಾರತದ ಸಂವಿಧಾನವನ್ನು ಪಾಶ್ಚಿಮಾತ್ಯ ಎಂದು ಕರೆದು ಅದನ್ನು ಟೀಕಿಸಲು ಆರೆಸ್ಸೆಸ್ ಎಂದೂ ಹಿಂದುಮುಂದು ನೋಡಲಿಲ್ಲ; ಬಿಜೆಪಿ ಎಂದೂ ಕೂಡ ಆರೆಸ್ಸೆಸ್ ಜತೆಗಿನ ತನ್ನ ಕರುಳ ಬಳ್ಳಿಯನ್ನು ಕತ್ತರಿಸಿಕೊಳ್ಳಲಿಲ್ಲ.
2014ರ ಸಾರ್ವತ್ರಿಕ ಚುನಾವಣೆಗಳ ವೇಳೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ತಾನು ಒಂದು ಹಿಂದೂ ಕುಟುಂಬದಲ್ಲಿ ಹುಟ್ಟಿದವ, ತಾನೊಬ್ಬ ರಾಷ್ಟ್ರೀಯವಾದಿ ಎಂದು ಘೋಷಿಸಿಕೊಂಡಿದ್ದರು. ಆದ್ದರಿಂದ ಅವರೊಬ್ಬ ಹಿಂದೂ ರಾಷ್ಟ್ರವಾದಿ. ಕೇಂದ್ರದಲ್ಲಿ ಸಚಿವರಾಗಿರುವ ಇನ್ನೋರ್ವ ಸಚಿವ ಅನಂತ ಕುಮಾರ್ ಹೆಗಡೆ, ‘‘ಬಿಜೆಪಿ ಭಾರತೀಯ ಸಂವಿಧಾನವನ್ನು ಬದಲಾಯಿಸಲಿಕ್ಕಾಗಿ ಇದೆ.’’ ಮತ್ತು ‘‘ಜನರು ಸೆಕ್ಯೂಲರ್ ಅಸ್ಮಿತೆಯನ್ನು ಬಳಸಬಾರದು’’ ಎಂದರು.
ಇದಕ್ಕೆಲ್ಲ ಕಳಶವಿಟ್ಟಂತೆ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್, ‘‘ಜಾತ್ಯತೀತತೆ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಸುಳ್ಳು’’ ಎಂದು ಹೇಳಿದರು. ಒಂದೆಡೆ ಅಧಿಕಾರ ದಾಹಿಗಳಾಗಿರುವ ಪಾಸ್ವಾನ್, ಉದಿತ್ ರಾಜ್ ಮತ್ತು ರಾಮದಾಸ್ ಆಠವಳೆಯಂತಹವರನ್ನು ಬಿಜೆಪಿ ದಲಿತ ಪರ ಎಂದು ಬಿಂಬಿಸಲು ಬಳಸಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಹೆಗಡೆ ಮತ್ತು ಯೋಗಿ ಅಂತಹವರು ತಮ್ಮ ರಾಜಕೀಯ ಅಜೆಂಡಾವನ್ನು ನೇರವಾಗಿಯೇ ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರ ರಾಜಕೀಯ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿರುವ ಒಂದು ಅಜೆಂಡಾವನ್ನು ಹೊಂದಿದ್ದರೂ ಚುನಾವಣಾ ಸಮೀಕರಣಗಳಿಗಾಗಿ ಬಿಜೆಪಿಯು ಅಂಬೇಡ್ಕರ್ ಅವರಿಗೆ ತನ್ನ ನಮನಗಳನ್ನು ಸಲ್ಲಿಸುತ್ತಿದೆ ಎಂಬುದು ಸತ್ಯ.
ತಳಮಟ್ಟದಲ್ಲಿ ಪಾಸ್ವಾನ್‌ರಂತಹವರು ಸದಸ್ಯರಾಗಿರುವ ಬಿಜೆಪಿ-ಎನ್‌ಡಿಎ ಮೈತ್ರಿ ಸರಕಾರವು ದಲಿತರ ಮೇಲೆ ತುಂಬಾ ಗಂಭೀರ ಸ್ವರೂಪದ ಪರಿಣಾಮ ಬೀರಿದೆ. ಪಾಸ್ವಾನ್ ಅವರು ಒಂದು ಚಿಕ್ಕ ಘಟನೆಯೆಂದು ಪೂನಾದಲ್ಲಿ ದಲಿತರ ಮೇಲೆ ನಡೆದ ಕ್ರೂರ ಥಳಿತವನ್ನು ತಳ್ಳಿಹಾಕಿದ್ದರು. ಹಾಗೆಯೇ ಪವಿತ್ರ ಹಸುವಿನ ಭಾವನಾತ್ಮಕ ಪ್ರಶ್ನೆಯು ದಲಿತರ ಜೀವನೋಪಾಯದ ಮೇಲೆ ತುಂಬಾ ದೊಡ್ಡ ಪರಿಣಾಮ ಬೀರಿದೆ. ಇದೇ ಆಡಳಿತದ ಅವಧಿಯಲ್ಲಿ ರೋಹಿತ್ ವೇಮುಲಾ ಅವರ ಸಾಂಸ್ಥಿಕ ಕೊಲೆ ನಡೆಯಿತು ಮತ್ತು ಭೀಮಾ ಕೋರೆಗಾಂವ್‌ನಲ್ಲಿ ನಡೆದ ದಲಿತ ವಿರೋಧಿ ದಾಳಿ ಆಡಳಿತ ಸಮುದಾಯವನ್ನು ಎಗ್ಗಿಲ್ಲದೆ ಹಿಂಸಿಸಿತ್ತು ಎಂಬುದನ್ನು ನಾವು ಮರೆಯ ಕೂಡದು.
ಬಿಜೆಪಿ ಅಂಬೇಡ್ಕರ್‌ರಿಗೆ ನಮನ ಸಲ್ಲಿಸುತ್ತದೆ; ಅದೇ ವೇಳೆ ಅದು ಶ್ರೀ ರಾಮನನ್ನು ತನ್ನ ರಾಜಕಾರಣದ ಕೇಂದ್ರ ಐಕಾನ್ ಆಗಿ ಜನರ ಮುಂದಿಡುತ್ತದೆ. ಶ್ರೀರಾಮನ ಬಗ್ಗೆ ಅಂಬೇಡ್ಕರ್ ಹೇಳುವುದು ನಮಗೆಲ್ಲ ಗೊತ್ತಿದೆ. ಬಾಬಾ ಸಾಹೇಬರಿಗೆ ಹೂ ಹಾರ ಹಾಕುವುದಷ್ಟೇ ಬಿಜೆಪಿಗೆ ಮುಖ್ಯ; ಅವರು ಹೇಳಿರುವ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಅದಕ್ಕೆ ಮುಖ್ಯವಲ್ಲ. ಹಿಂದೂರಾಜ್(ಹಿಂದೂ ರಾಷ್ಟ್ರ) ಎಂಬುದು ದೇಶದ ದಲಿತರ ಪಾಲಿಗೆ ಒಂದು ದೊಡ್ಡ ದುರಂತವಾಗುತ್ತದೆಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು.
ಮೂಲತಃ ದಲಿತ ವಿರೋಧಿಯಾಗಿರುವ ಬಿಜೆಪಿ-ಆರೆಸ್ಸೆಸ್ ಜತೆ ಮೈತ್ರಿ ಮಾಡಿಕೊಂಡಿರುವುದು ತಮ್ಮ ಮೂರ್ಖತನವೆಂದು ಪಾಸ್ವಾನ್‌ರಂತಹವರು ಮನಗಾಣುತ್ತಾರೆಂದು ನಿರೀಕ್ಷಿಸುವುದು ಖಂಡಿತಾ ತಪ್ಪು!







