ವಿಶೇಷ ಭಡ್ತಿ ತಾರತಮ್ಯ ಸರಿಪಡಿಸಲು ಶಿಕ್ಷಕರ ಆಗ್ರಹ
ಬೆಂಗಳೂರು, ಆ.29: ಕುಮಾರ ನಾಯಕ್ ವರದಿ ಅನ್ವಯ ಪ್ರೌಢಶಾಲಾ ಶಿಕ್ಷಕರಿಗೆ ವಾರ್ಷಿಕ ವಿಶೇಷ ಭಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನ ಎಂದು ಪರಿಗಣಿಸಿ ಸವಲತ್ತುಗಳನ್ನು ಕಡಿತ ಮಾಡುತ್ತಿರುವ ಕ್ರಮವನ್ನು ಕೈಬಿಟ್ಟು, ಮೂಲ ವೇತನದೊಂದಿಗೆ ಮುಂದುವರಿಸಬೇಕು ಎಂದು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್, 2008 ರ ಆ.1 ರ ನಂತರ ಪ್ರಾಥಮಿಕ ಶಾಲೆಯಿಂದ ಮುಂಭಡ್ತಿ ಹಾಗೂ ನೇರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ 400 ರೂ. ವಿಶೇಷ ಭತ್ತೆ ನೀಡಲಾಗುತ್ತಿದೆ. ಆದರೆ, 6 ನೆ ವೇತನ ಆಯೋಗದ ಪ್ರಕಾರ ಒಂದು ವಿಶೇಷ ವಾರ್ಷಿಕ ಭಡ್ತಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸರಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿ ವಿದ್ಯಾರ್ಥಿಗಳ ಅನುಪಾತವನ್ನು 70:1 ರ ಬದಲಿಗೆ 50:1ಕ್ಕೆ ನಿಗದಿ ಮಾಡಬೇಕು. ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು. ಅನುಪಾತವನ್ನು ಬದಲಾವಣೆ ಮಾಡುವವರೆಗೂ ಶಿಕ್ಷಕರಿಗೆ ಹೆಚ್ಚುವರಿ ಕೆಲಸಗಳ ಪ್ರಕ್ರಿಯೆಯನ್ನು ಸ್ಥಗಿತ ಮಾಡಬೇಕು. ಅನುದಾನರಹಿತ ಶಾಲಾ ಶಿಕ್ಷಕರಿಗೆ ಬಸವರಾಜ್ ಹೊರಟ್ಟಿ ಅಧ್ಯಕ್ಷತೆಯಲ್ಲಿ ರಚನೆಗೊಂಡಿರುವ ಸಮಿತಿ ವರದಿಗಳನ್ನು ಯಥಾವತ್ ಜಾರಿ ಮಾಡಬೇಕು ಎಂದು ಅವರು ಹೇಳಿದರು.
ಪ್ರೌಢಶಾಲಾ ಸಹ ಶಿಕ್ಷಕರನ್ನು ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಬೆಂಗಳೂರು, ಕಲಬುರ್ಗಿ, ಧಾರವಾಡ, ಆಯುಕ್ತಾಲಯಗಳಲ್ಲಿ ಮುಂಭಡ್ತಿ ಒದಗಿಸಬೇಕು. ಕೂಡಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡಬೇಕು. ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪ್ರತ್ಯೇಕ ಉಪ ಪ್ರಾಂಶುಪಾಲ ಹುದ್ದೆ ಸೃಷ್ಟಿಸಬೇಕು. ಪ್ರಭಾರ ಕಾರ್ಯ ನಿರ್ವಹಣೆ ಮಾಡುತ್ತಿರುವ ಉಪ ಪ್ರಾಂಶುಪಾಲರಿಗೆ ಪ್ರಭಾರ ಭತ್ತೆ ನೀಡಬೇಕು ಎಂದರು.
ರಾಜ್ಯ ಸರಕಾರ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುತ್ತದೆ. ಅದಕ್ಕೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ, ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಬೃಹತ್ ಧರಣಿ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಸಿದ್ದಣ್ಣ ಪೂಜಾರಿ, ರಾಮು ಆ.ಗುಗುವಾಡ, ಲಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.







