ಕಾಶ್ಮೀರ: ಇಬ್ಬರು ಹಿಝ್‌ಬುಲ್ ಉಗ್ರರ ಹತ್ಯೆ

ಶ್ರೀನಗರ, ಆ.29: ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಹಿಝ್‌ಬುಲ್ ಮುಜಾಹಿದೀನ್ ಸಂಘಟನೆಯ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಹಿಝ್‌ಬುಲ್ ಸಂಘಟನೆಯ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬನಾಗಿರುವ ಅಲ್ತಾಫ್ ಕಚ್ರು ಹಾಗೂ ಆತನ ಸಹಚರನನ್ನು ಹತ್ಯೆಗೈಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಅಲ್ತಾಫ್ ಪೊಲೀಸ್ ಸಿಬ್ಬಂದಿಗಳ ಹತ್ಯೆಯೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯ ಖಾನಾಬಾಲ್ ಪ್ರದೇಶದ ಮುನಿವಾರ್ಡ್ ಎಂಬ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ದೊರೆತ ಮಾಹಿತಿಯಂತೆ ಅಲ್ಲಿಗೆ ಧಾವಿಸಿದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದರು. ಆಗ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವರಿಬ್ಬರು ರಾಜ್ಯದಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ಕಾಶ್ಮೀರ ವಲಯದ ಐಜಿಪಿ ಎಸ್.ಪಿ.ಪಾಣಿ ತಿಳಿಸಿದ್ದಾರೆ.
ನಾಲ್ವರು ಪೊಲೀಸರ ಹತ್ಯೆ:
ಈ ಮಧ್ಯೆ, ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಉಗ್ರರು ನಾಲ್ವರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ.
ತಾವು ಪ್ರಯಾಣಿಸುತ್ತಿದ್ದ ವಾಹನ ದಾರಿ ಮಧ್ಯೆ ಕೆಟ್ಟು ನಿಂತಾಗ ಅದನ್ನು ದುರಸ್ತಿ ಪಡಿಸಲು ಮುಂದಾದ ಪೊಲೀಸರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು ತೀವ್ರ ಗಾಯಗೊಂಡ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪೊಲೀಸರ ಬಳಿಯಿದ್ದ ಶಸ್ತ್ರಗಳು ನಾಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







