ಅಂಬೇಡ್ಕರ್ ಭವನದ ಕಳಪೆ ಕಾಮಗಾರಿ: ತಾ.ಪಂ. ಸದಸ್ಯ ಶ್ರೀನಿವಾಸ್ ಆರೋಪ
ದೇವನಹಳ್ಳಿ, ಆ.29: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಕಳಪೆ ಕಾಮಗಾರಿಯಿಂದ ಕೂಡಿದ್ದು, ಅದನ್ನು ಸರಿ ಪಡಿಸಬೇಕಾದರೆ ಹೆಚ್ಚುವರಿ 10 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ ಎಂದು ತಾಲೂಕು ಪಂಚಾಯತ್ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಭವನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ ಮತ್ತು ಅದರ ನಿರ್ವಹಣೆಯೂ ಸರಿಯಾಗಿಲ್ಲ. ಹೀಗಾಗಿ ಬರುವ ಬಾಡಿಗೆಯಿಂದ ವಿದ್ಯುತ್ ಬಿಲ್ ಕಟ್ಟಲು ಸಾಕಾಗುವುದಿಲ್ಲ ಎಂದು ದೂರಿದರು.
ನಾವು ಅಭಿವೃದ್ದಿಯ ಕಡೆ ಮುನ್ನಡೆಯಬೇಕಾದರೆ ಶಿಕ್ಷಣ ವ್ಯವಸ್ಥೆ ಉತ್ತಮ ರೀತಿಯಲ್ಲಿರಬೇಕು. ವಸತಿ ನಿಲಯಗಳು ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಅದರಿಂದ ಸಮಾಜ ಅಭಿವೃದ್ಧಿ ಸಾಧ್ಯ. ಎಲ್ಲ ಇಲಾಖೆಗಳಿಂದ ಶೇ.24.5 ರ ಅನುದಾನ ಉತ್ತಮವಾಗಿ ಬಳಕೆಯಾಗಬೇಕು ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಕಾಲನಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಹೀಗಾಗಿ, ಶಾಸಕರು ಸದನದಲ್ಲಿ ದನಿ ಎತ್ತುವ ಮೂಲಕ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಕೋರಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸಾರ್ವಜನಿಕರು, ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಇಬ್ಬರ ನಡುವೆ ಬಾಂಧವ್ಯ ಬೆಸೆದರೆ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುತ್ತದೆ ಎಂದು ಸಲಹೆ ನೀಡಿದರು.







