ಬಾಂಗ್ಲಾ: ಮನೆಗೆ ನುಗ್ಗಿ ಪತ್ರಕರ್ತೆಯ ಕೊಲೆ

ಢಾಕಾ (ಬಾಂಗ್ಲಾದೇಶ), ಆ. 29: ಬಾಂಗ್ಲಾದೇಶದ ಟೆಲಿವಿಶನ್ ಚಾನೆಲ್ ಒಂದರ ಪತ್ರಕರ್ತೆಯೊಬ್ಬರನ್ನು ಅಜ್ಞಾತ ವ್ಯಕ್ತಿಗಳು ಅವರ ಮನೆಯಲ್ಲೇ ಕಡಿದು ಕೊಂದಿದ್ದಾರೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
32 ವರ್ಷದ ಸುಬರ್ಣ ನೋದಿ, ಖಾಸಗಿ ಸುದ್ದಿ ಚಾನೆಲ್ ‘ಆನಂದ ಟಿವಿ’ಯ ವರದಿಗಾರ್ತಿಯಾಗಿದ್ದರು. ಅವರು ‘ಡೇಲಿ ಜಾಗೃತೋ ಬಾಂಗ್ಲಾ’ ಪತ್ರಿಕೆಗೂ ಕೆಲಸ ಮಾಡಿದ್ದರು.
ಅವರು ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಪಾಬ್ನ ಜಿಲ್ಲೆಯ ರಾಧಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಮೋಟರ್ ಸೈಕಲ್‌ಗಳಲ್ಲಿ ಬಂದ 10-12ರಷ್ಟಿದ್ದ ಹಂತಕರು ಮಂಗಳವಾರ ರಾತ್ರಿ ಸುಮಾರು 10:45ರ ವೇಳೆಗೆ ಪತ್ರಕರ್ತೆಯ ಮನೆಯ ಬೆಲ್ ಬಾರಿಸಿದರು. ಅವರು ಬಾಗಿಲು ತೆಗೆದಾಗ ಹಂತಕರು ಮನಬಂದಂತೆ ಕಡಿದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
9 ವರ್ಷದ ಮಗಳನ್ನು ಹೊಂದಿರುವ ಸುಬರ್ಣ ಗಂಡನಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
Next Story





