ಶೌಚಾಲಯ ಬಳಕೆಗೆ ವಿಶೇಷ ಜಾಗೃತಿ ಆಂದೋಲನ: ಸಚಿವ ಕೃಷ್ಣ ಭೈರೇಗೌಡ

ಧಾರವಾಡ, ಆ.29: ಸ್ವಚ್ಛ ಭಾರತ ಮಿಷನ್ ಅಡಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಬಳಸಲು ಆಂದೋಲನದ ಮಾದರಿಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಈ ಕುರಿತು ಇರುವ ಮನೋಭಾವ, ರೂಢಿಗಳನ್ನು ಬದಲಾಯಿಸಲು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ಎನ್‌ಆರ್‌ಡಿಡಬ್ಲುಪಿ, ಎಸ್‌ಡಿಪಿ, ಟಾಸ್ಕ್ ಫೋರ್ಸ್ ಮತ್ತಿತರ ಕಾರ್ಯಕ್ರಮಗಳಡಿ ಕೈಗೊಂಡ ಕಾಮಗಾರಿಗಳ ಹಣ ಪಾವತಿಯಲ್ಲಿ ದೀರ್ಘಕಾಲೀನ ವಿಳಂಬವಾಗಬಾರದು. 2016-17ರ ಕಾಮಗಾರಿಗಳ ವೆಚ್ಚವು ಮಾರ್ಚ್ 2018ರವರೆಗೂ ಪಾವತಿಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದೆ ಹೀಗಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.
ಶೌಚಾಲಯಗಳನ್ನು ಕಟ್ಟಿದ ಬಳಿಕ ಅವುಗಳ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ ಅವರ ಸಲಹೆಗಳನ್ನು ಪಡೆಯಬೇಕು. ಸರಕಾರೇತರ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಗೆ ಒಂದು ವಿಶೇಷ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಬೇಕು ಎಂದು ಕೃಷ್ಣಭೈರೇಗೌಡ ಹೇಳಿದರು.
ಎರಡು ಗ್ರಾ.ಪಂ.ಗಳನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಬೇಕು. ಹಸಿ ಕಸ, ಒಣ ಕಸ ನಿರ್ವಹಣೆ, ವಿಲೇವಾರಿ, ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಹೊಸ ಪ್ರಯೋಗಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಚುನಾಯಿತ ಪ್ರತಿನಿಧಿಗಳು ನಮ್ಮ ಹಕ್ಕು, ಕರ್ತವ್ಯಗಳನ್ನು ಅರಿತುಕೊಂಡು ಅಧಿಕಾರಿಗಳಿಂದ ಕೆಲಸ ಪಡೆಯಬೇಕು. ಸಂವಿಧಾನ ಹಾಗೂ ಪಂಚಾಯತರಾಜ್ ಕಾಯಿದೆಯಲ್ಲಿ ಎಲ್ಲ ಅಧಿಕಾರ ಮತ್ತು ಜವಾಬ್ದಾರಿಗಳು ವಿವರಿಸಲ್ಪಟ್ಟಿವೆ. ಅವುಗಳನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ನರೇಗಾ ಯೋಜನೆಯಡಿಯಲ್ಲಿ ನಾಲಾ ಅಭಿವೃದ್ಧಿ ಸೇರಿಸಿ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುವ ವಿಶೇಷ ಪ್ಯಾಕೇಜ್ ತಯಾರಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿ. ಮುಂದಿನ ಗ್ರಾಮ ಸಭೆಯವರೆಗೂ ಕಾಯಬೇಡಿ. ಜಲಸಂರಕ್ಷಣೆಯ ಕಾರ್ಯ ಆದ್ಯತೆಯ ಮೇಲೆ ನಡೆಯಬೇಕು ಎಂದು ಕೃಷ್ಣಭೈರೇಗೌಡ ಸೂಚಿಸಿದರು. ಈ ವರ್ಷ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕನಿಷ್ಠ 100 ಚೆಕ್ ಡ್ಯಾಮುಗಳನ್ನಾದರೂ ನಿರ್ಮಿಸಲೇಬೇಕು. ಇಚ್ಛಾಶಕ್ತಿ ಇದ್ದರೆ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕನಿಷ್ಠ 200 ರಿಂದ 250 ಕೋಟಿ ರೂ.ಗಳ ಉದ್ಯೋಗ ಸೃಷ್ಟಿ ಮತ್ತು ಪ್ರಗತಿ ಕಾರ್ಯಗಳನ್ನು ಕೈಗೊಳ್ಳಬಹುದು. ಈ ಹಣಕ್ಕಾಗಿ ಸರಕಾರದ ಕಡೆ ಎದುರು ನೋಡುವ ಅವಶ್ಯಕತೆ ಇರುವುದಿಲ್ಲ. ಪಂಚಾಯತ್ ಹಂತದಲ್ಲಿಯೇ ಖರ್ಚು ಮಾಡಬಹುದು ಎಂದು ಅವರು ಹೇಳಿದರು.
ಅನುಷ್ಠಾನಾಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ ಕೆಲಸ ಪಡೆಯಬೇಕು. ಅಧಿಕಾರಿಗಳು ಸಾಮಾನ್ಯವಾದ ಕೆಲಸದ ಮನೋಭಾವದಿಂದ ಹೊರಬಂದು ಸೃಜನಶೀಲವಾಗಿ ಆಲೋಚಿಸಿದರೆ ಇರುವ ಅವಕಾಶಗಳಲ್ಲಿಯೇ ಅನೇಕ ಹೊಸ ಪ್ರಯೋಗಗಳನ್ನು ಮಾಡಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಿಯಮಾವಳಿಗಳನ್ನು ಅಪೂರ್ಣವಾಗಿ ಅರ್ಥೈಸಿಕೊಂಡು ಜನರಿಗೆ ತೊಂದರೆ ಕೊಡಬಾರದು. ಜಿಲ್ಲೆಯ ಹಿರಿಯ ಅಧಿಕಾರಿಗಳು ಪ್ರತಿ ಎರಡು ವಾರಗಳಿಗೊಮ್ಮೆ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂದು ಅವರು ಹೇಳಿದರು. ನರೇಗಾ ಯೋಜನೆಯಡಿ ಕೂಲಿ ಹಾಗೂ ವಸ್ತುಗಳನ್ನು 60:40ರ ಅನುಪಾತ ಕಾಯ್ದುಕೊಳ್ಳುವ ಮೂಲಕ ಅನೇಕ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ. ನಾಲಾ ಜೋಡಣೆ, ಶಾಲೆಗಳಿಗೆ ಆಟದ ಮೈದಾನ, ಕಾಂಪೌಂಡ್ ನಿರ್ಮಾಣ, ತೋಟಗಾರಿಕಾ ಕ್ಷೇತ್ರಗಳ ಅಭಿವೃದ್ಧಿಯಂತಹ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು. ಇದೆಲ್ಲದಕ್ಕೂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಇಚ್ಛಾಶಕ್ತಿ ಅಗತ್ಯ ಎಂದು ಕೃಷ್ಣ ಭೈರೇಗೌಡ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಸಿ.ಎಸ್.ಶಿವಳ್ಳಿ, ಸಿ.ಎಂ.ನಿಂಬಣ್ಣವರ್, ಅಮೃತ ದೇಸಾಯಿ, ಜಿ.ಪಂ.ಉಪಾಧ್ಯಕ್ಷ ಶಿವಾನಂದ ಕರಿಗಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿ.ಪಂ.ಸಿಇಓ ಸ್ನೇಹಲ್ ರಾಯಮಾನೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಜಿ.ಕೊರವರ ಮತ್ತಿತರರು ಇದ್ದರು.







