ಮಾಧ್ಯಮ ಉಳ್ಳವರ ಪ್ರತಿನಿಧಿಯಾಗಿದೆ: ಹಿರಿಯ ಪತ್ರಕರ್ತ ಜಿ.ಎನ್.ಮೋಹನ್
ಬೆಂಗಳೂರು, ಆ.29: ಜಾಗತೀಕರಣದ ಕಪಿಮುಷ್ಟಿಯಲ್ಲಿರುವ ಮಾಧ್ಯಮಗಳು ಕೇವಲ ಉಳ್ಳವರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಜ್ಞಾನ, ಸಂವೇದನೆ ಹಾಗೂ ಸಮಾಜ ಪರವಾದ ಕಾಳಜಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅಭಿಪ್ರಾಯಿಸಿದರು.
ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ಕನ್ನಡ ಸಾಹಿತ್ಯ ಮತ್ತು ಡಿಜಿಟಲ್ ಮಾಧ್ಯಮ’ ವಿಷಯದ ಕುರಿತು ಮಾತನಾಡಿದ ಅವರು, ಇವತ್ತಿನ ಮಾಧ್ಯಮಗಳು ಉಳ್ಳವರಿಗೆ ಏನು ಬೇಕೆಂಬುದರ ಬಗ್ಗೆ ಮಾಹಿತಿ ನೀಡುವುದಷ್ಟಕ್ಕೆ ಸೀಮಿತಗೊಂಡಿವೆ ಎಂದು ತಿಳಿಸಿದರು.
ಇವತ್ತಿನ ಆಧುನಿಕ ತಂತ್ರಜ್ಞಾನವು ಇಡೀ ಜಗತ್ತನೆ ಆವರಿಸಿಕೊಂಡಿದೆ. ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಈ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಹಿನ್ನೆಲೆಯಲ್ಲಿ ತಂತ್ರಜ್ಞಾನ ವ್ಯಕ್ತಿಯೊಬ್ಬನಿಗೆ ವರವು ಆಗಬಹುದು, ಶಾಪವು ಆಗಬಹುದೆಂದು ಅವರು ಅಭಿಪ್ರಾಯಿಸಿದರು.
ಪೆಂಗ್ವಿನ್ ಪ್ರಕಾಶನವು ಶೇಕ್ಸ್‌ಪಿಯರ್‌ನ ಮಹಾಕಾವ್ಯಗಳ ಒಟ್ಟು ಸಾರಾಂಶವನ್ನು ಕೇವಲ ಟ್ವಿಟರ್ ಪ್ರಕಾರದಲ್ಲಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಕುವೆಂಪು ರಚನೆಯ 500ಪುಟಗಳ ಗಾತ್ರದ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಸಾರಾಂಶವನ್ನು ಕೆಲವೆ ಪದಗಳಲ್ಲಿ ಪ್ರಕಟಗೊಂಡರೆ ಅಚ್ಚರಿಯಿಲ್ಲ. ತಂತ್ರಜ್ಞಾನ ಬೆಳೆದಂತೆ ನಾವು ಸಂವೇದನೆ ಕಳೆದುಕೊಳ್ಳುತ್ತಿರುವುದಕ್ಕೆ ಇವೆಲ್ಲವು ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.







