ನಿಮ್ಮ ಮೂಗು ನಿಮ್ಮ ಆರೋಗ್ಯವನ್ನು ಹೇಳುತ್ತದೆ,ಗೊತ್ತೇ....?
ನಮ್ಮ ಮೂಗು ಕೂಡ ನಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಸಂಕೇತಗಳನ್ನು ನೀಡುತ್ತದೆ ಎನ್ನುವುದು ಬಹುಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಮೂಗು ಸೋರುತ್ತಿದ್ದರೆ ಅದು ಫ್ಲೂ ಅಥವಾ ಶೀತದ ಲಕ್ಷಣ ಎನ್ನುವುದಷ್ಟೇ ನಮಗೆ ಗೊತ್ತು. ಆದರೆ ಘ್ರಾಣಶಕ್ತಿ ನಷ್ಟ ಮತ್ತು ಘ್ರಾಣಸಂಬಂಧಿ ಭ್ರಮೆ ಅಂದರೆ ಯಾವುದೇ ವಾಸನೆಯಿಲ್ಲದಿದ್ದರೂ ಇದೆ ಎಂದು ಭ್ರಮಿಸುವುದು ಇತ್ಯಾದಿ ಲಕ್ಷಣಗಳು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಬೆಟ್ಟುಮಾಡುತ್ತವೆ.
ಮೂಗಿನ ನೋಟದಿಂದ ಹಿಡಿದು ವಾಸನೆಯನ್ನು ಗ್ರಹಿಸುವ ಅದರ ಶಕ್ತಿ ಮತ್ತು ಸಿಂಬಳದ ಬಣ್ಣದವರೆಗೆ ಮೂಗಿನ ಕುರಿತ ಎಲ್ಲ ಸಂಗತಿಗಳೂ ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತವೆ. ಈ ಬಗ್ಗೆ ಅಗತ್ಯ ಮಾಹಿತಿ ಇಲ್ಲಿದೆ....
►ಮೂಗಿನಲ್ಲಿ ರಕ್ತಸ್ರಾವ
ಮೂಗಿನಲ್ಲಿ ರಕ್ತಸ್ರಾವ ಹೆಚ್ಚಿನವರು ಅನುಭವಿಸಿರುತ್ತಾರೆ. ಮೂಗಿನ ಒಳಪದರ ಸದಾ ತೇವವಾಗಿರುತ್ತದೆ. ನಾವು ಒಣಗಾಳಿಯನ್ನು ಉಸಿರಾಡಿಸಿದಾಗ ಈ ಒಳಪದರಕ್ಕೆ ಅಗತ್ಯ ಆರ್ದ್ರತೆ ದೊರೆಯದೆ ಒಣಗುತ್ತದೆ ಇದರಿಂದಾಗಿ ಪದರದಲ್ಲಿ ಬಿರುಕುಗಳು ಉಂಟಾಗಿ ಬ್ಯಾಕ್ಟೀರಿಯಾ ಸೋಂಕುಗಳಿಗೆ ಸುಲಭದ ಗುರಿಯಾಗುತ್ತದೆ. ಮೂಗಿನ ಒಳಪದರದ ಚರ್ಮ ಅತ್ಯಂತ ತೆಳುವಾಗಿದ್ದು,ಸೂಕ್ಷ್ಮನರಗಳ ತುದಿಗಳು ಇಲ್ಲಿರುತ್ತವೆ ಮತ್ತು ಈ ನರಾಗ್ರಗಳು ಒಡೆದರೆ ರಕ್ತ ಒಸರುತ್ತದೆ. ಸಾಮಾನ್ಯವಾಗಿ ಮೂಗಿನಲ್ಲಿ ರಕ್ತಸ್ರಾವ ಯಾವುದೇ ಗಂಭೀರ ಕಾಯಿಲೆಯನ್ನು ಸೂಚಿಸುವುದಿಲ್ಲವಾದರೂ ಅದು ಕೆಳಗಿನ ಸಮಸ್ಯೆಗಳ ಲಕ್ಷಣವಾಗಿರಬಹುದು.
►ವಂಶಾನುಗತ ಹೆಮರಾಜಿಕ್ ತೆಲಂಗಿಕ್ಟಾಸಿಯಾ(ಎಚ್ಎಚ್ಟಿ)
ಇದೊಂದು ಅಪರೂಪದ ವಂಶವಾಹಿ ರೋಗವಾಗಿದ್ದು ಮೂಗಿನಲ್ಲಿ ರಕ್ತಸ್ರಾವ ಮತ್ತು ರಕ್ತನಾಳಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಮುಖ, ಕೈಕಾಲುಗಳಲ್ಲಿ ಪುಟ್ಟ ಕೆಂಪು ಕಲೆಗಳು ಕಾಣಿಸಿಕೊಂಡಿದ್ದರೆ ಅಥವಾ ಬೆಳಿಗ್ಗೆ ಎದ್ದಾಗ ತಲೆದಿಂಬಿನಲ್ಲಿ ಮೂಗಿನ ರಕ್ತಸ್ರಾವದ ಕಲೆಗಳಿದ್ದರೆ ಮತ್ತು ನಿಮ್ಮ ಕುಟುಂಬದಲ್ಲಿ ಎಚ್ಎಚ್ಟಿ ಯ ಇತಿಹಾಸವಿದ್ದರೆ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.
►ಒಣ ಸೈನಸ್ಗಳು
ಸೈನಸ್ ಅಥವಾ ಕುಹರಗಳು ಒಣಗಿದ್ದರೆ ಮೂಗಿನ ಚರ್ಮದಲ್ಲಿ ಬಿರುಕುಗಳು ಮೂಡುತ್ತವೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತವೆ.
ಮೂಗಿನಲ್ಲಿ ಆಗಾಗ್ಗೆ ಬೆರಳು ತೂರಿಸಿ ಕೆದಕುವುದು,ಹಿಮೊಫಿಲಿಯಾ,ಬ್ಲಡ್ ಥಿನ್ನರ್ಸ್,ಮೂಗಿನ ಸ್ಪ್ರೇಗಳು,ಆಸ್ಪಿರಿನ್ ಇತ್ಯಾದಿಗಳೂ ಮೂಗಿನಲ್ಲಿ ರಕ್ತಸ್ರಾವವನ್ನುಂಟು ಮಾಡುತ್ತವೆ.
►ಘ್ರಾಣಶಕ್ತಿಯ ನಷ್ಟ
ಘ್ರಾಣಶಕ್ತಿಯು ನಷ್ಟಗೊಂಡಿದ್ದರೆ ಅದು ಮಧುಮೇಹ,ಮೂಗಿನಲ್ಲಿ ದುರ್ಮಾಂಸ ಇತ್ಯಾದಿಗಳನು ಸೂಚಿಸುತ್ತದೆ.
►ಮಧುಮೇಹ
ಮಧುಮೇಹಕ್ಕೂ ಘ್ರಾಣಶಕ್ತಿ ನಷ್ಟಕ್ಕೂ ಸಂಬಂಧ ಸ್ಪಷ್ಟವಾಗಿಲ್ಲವಾದರೂ, ರಕ್ತದಲ್ಲಿಯ ಅಧಿಕ ಸಕ್ಕರೆಯ ಮಟ್ಟವು ಅಂಗಗಳು,ರಕ್ತನಾಳಗಳು ಮತ್ತು ವಾಸನೆಯನ್ನು ಗ್ರಹಿಸುವ ನರಗಳಿಗೆ ಹಾನಿಯನ್ನುಂಟು ಮಾಡಬಹುದು.
►ಮೂಗಿನಲ್ಲಿ ದುರ್ಮಾಂಸ
ಇವು ಮೂಗಿನ ಹೊಳ್ಳೆಗಳಲ್ಲಿ ಬೆಳೆಯುವ ಕ್ಯಾನ್ಸರ್ಕಾರಕವಲ್ಲದ, ನೋವಿಲ್ಲದ,ಮಾಂಸದ ಮೃದು ಗಡ್ಡೆಗಳಾಗಿವೆ. ಇವು ಘ್ರಾಣ ಕೋಶಗಳಿಗೆ ವಾಸನೆಯು ತಲುಪುವುದನ್ನು ತಡೆಯುವ ಮೂಲಕ ಘ್ರಾಣಶಕ್ತಿಯನ್ನು ಕುಂದಿಸುತ್ತವೆ. ಇವುಗಳನ್ನು ಔಷಧಿಗಳ ನೆರವಿನಿಂದ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ.
►ನರಕೋಶಗಳು ನಾಶಗೊಳ್ಳುವ ಕಾಯಿಲೆ
ನಿಮ್ಮ ಘ್ರಾಣಶಕ್ತಿ ಕಡಿಮೆಯಾಗುತ್ತಿದ್ದರೆ ಅದು ಅಲ್ಝೀಮರ್ಸ್ ಅಥವಾ ಪಾರ್ಕಿನ್ಸನ್ಸ್ ಕಾಯಿಲೆಯಂತಹ ನರಕೋಶಗಳ ಸಾಯುವಿಕೆಯಿಂದ ಉಂಟಾಗುವ ರೋಗಗಳ ಅಪಾಯವನ್ನು ಸೂಚಿಸಬಹುದು. ಹೀಗಾಗಿ ಇಂತಹ ಲಕ್ಷಣ ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಈ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲವಾದರೂ ಲಕ್ಷಣಗಳನ್ನು ಕಡಿಮೆಗೊಳಿಸಲು ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸುವಲ್ಲಿ ವೈದ್ಯರು ನೆರವಾಗಬಹುದು.
►ಫ್ಯಾಂಟಮ್ ಸ್ಮೆಲ್
ಇದು ವಾಸ್ತವದಲ್ಲಿ ಯಾವುದೇ ವಾಸನೆಯಿಲ್ಲದಿದ್ದರೂ ಒಳ್ಳೆಯ ಅಥವಾ ಕೆಟ್ಟ ವಾಸನೆಯಿದೆ ಎಂಬ ಅನುಭವವನ್ನುಂಟು ಮಾಡುವ ಚಿತ್ತಭ್ರಾಂತಿಯ ಸ್ಥಿತಿಯಾಗಿದೆ ಮತ್ತು ಇದನ್ನು ಸರಳವಾಗಿ ಘ್ರಾಣಸಂಬಂಧಿ ಭ್ರಮೆ ಎನ್ನಬಹುದು. ಇದು ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣವಾಗಬಹುದು. ಈ ಸ್ಥಿತಿ ಮೂಗಿನ ಒಂದು ಅಥವಾ ಎರಡೂ ಹೊಳ್ಳೆಗಳಲ್ಲಿ ಉಂಟಾಗುತ್ತದೆ. ಸೈನಸ್ ಅಥವಾ ಕುಹರದ ಸೋಂಕು ಮತ್ತು ತಲೆಯ ಗಾಯಗಳು,ಮಿದುಳಿನಲ್ಲಿ ಗಡ್ಡೆ,ನರಕೋಶಗಳು ಸಾಯುವ ರೋಗದಂತಹ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಇದಕ್ಕೆ ಕಾರಣವಾಗುತ್ತವೆ.
►ರೋಸಸೆಯಾ:ಇದು ಮೂಗಿನ ಸುತ್ತಲಿನ ಚರ್ಮ ಕೆಂಪಗಾಗಲು ಅಥವಾ ದಪ್ಪವಾಗಲು ಕಾರಣವಾಗುತ್ತದೆ. ಇದಲ್ಲಿ ಒಂದು ವಿಧವಾಗಿರುವ ರಿನೊಫೈಮಾ ಮೂಗಿನ ಆಕಾರವನ್ನು ಬದಲಿಸುತ್ತದೆ ಮತ್ತು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಈ ಸಮಸ್ಯೆ ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ.
ಅಂದ ಹಾಗೆ ಮೂಗಿನಿಂದ ಸುರಿಯುವ ಸಿಂಬಳದ ಬಣ್ಣವು ಸೋಂಕುಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಅದರ ಬಣ್ಣ ಹಳದಿ ಅಥವಾ ಹಸಿರಾಗಿದ್ದರೆ ವೈರಲ್ ಅಥವಾ ಬ್ಯಾಕ್ಟೀರಿಯಾ ಸೋಂಕನ್ನು ಸೂಚಿಸಬಹುದು. ವೈದ್ಯರು ಆ್ಯಂಟಿಬಯಾಟಿಕ್ಗಳ ಮೂಲಕ ಇದನ್ನು ವಾಸಿ ಮಾಡುತ್ತಾರೆ. ಅದು ಕಂದುಬಣ್ಣದ್ದಾಗಿದ್ದರೆ ತೀವ್ರ ವಾಯು ಮಾಲಿನ್ಯ,ಅತಿಯಾದ ತಂಬಾಕು ಸೇವನೆ,ಒಣಗಿದ ರಕ್ತ ಇತ್ಯಾದಿಗಳು ಕಾರಣವಾಗಿರುತ್ತವೆ. ಸಿಂಬಳದ ಬಣ್ಣ ಕಪ್ಪಾಗಿದ್ದರೆ ಅದು ಉಸಿರಾಟ ವ್ಯವಸ್ಥೆಯಲ್ಲಿ ಶಿಲೀಂಧ್ರ ಸೋಂಕನ್ನು ಸೂಚಿಸುತ್ತದೆ. ಅತಿಯಾದ ಧೂಳಿನ ಉಸಿರಾಟವೂ ಇದಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.