ಮಂಗಳೂರು ವಿವಿ: ವಿದ್ಯಾರ್ಥಿನಿಯರ ಎದುರು ಅಶ್ಲೀಲವಾಗಿ ವರ್ತಿಸಿದ ಅಪರಿಚಿತ
ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಧರಣಿ

ಉಳ್ಳಾಲ, ಆ. 30: ನಾಲ್ವರು ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅಪರಿಚಿತನೋರ್ವ ಅಶ್ಲೀಲವಾಗಿ ವರ್ತಿಸಿದ ಘಟನೆ ಬುಧವಾರ ಸಂಜೆ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ನಡೆದಿದ್ದು, ತಪ್ಪಿತಸ್ಥನ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮಂಗಳಗಂಗೋತ್ರಿಯ ಆವರಣದಲ್ಲಿ ಬುಧವಾರ ಸಂಜೆ ನಾಲ್ವರು ವಿದ್ಯಾರ್ಥಿನಿಯರು ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ನಡೆದುಕೊಂಡು ಹೋಗುವ ಸಂದರ್ಭ ಕನ್ನಡ ವಿಭಾಗದ ಬಳಿಯ ರಸ್ತೆಯಲ್ಲಿ ಬೈಕಿನಲ್ಲಿ ಬಂದಿದ್ದ ಅಪರಿಚಿತ ಪ್ಯಾಂಟಿನ ಝಿಪ್ ತೆಗೆದು ಅಶ್ಲೀಲವಾಗಿ ಸನ್ನೆ ಮಾಡಿದ್ದ ಎನ್ನಲಾಗಿದೆ. ತದನಂತರ ವಿದ್ಯಾರ್ಥಿನಿಯರು ಸೆಕ್ಯುರಿಟಿ ಸಿಬ್ಬಂದಿಗೆ ದೂರು ನೀಡುತ್ತಿದ್ದಂತೆ, ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಅವರು ದೂರಿದ್ದಾರೆ.
ಘಟನೆಯಿಂದ ಕಂಗಾಲಾದ ವಿದ್ಯಾರ್ಥಿನಿಯರು ಸಹಿ ಹಾಕಿದ ದೂರಿನ ಪತ್ರವನ್ನು ವಿ.ವಿ. ಅಧಿಕಾರಿಗಳಿಗೆ ನೀಡಿದ್ದರು. ಆದರೆ ಗುರುವಾರ ಬೆಳಗ್ಗಿನವರೆಗೂ ಆರೋಪಿಯ ಬಗ್ಗೆ ಯಾವುದೇ ಸುಳಿವು ಪತ್ತೆಯಾಗದಿದ್ದರಿಂದ ಹಾಗೂ ಆರೋಪಿಯನ್ನು ಶೀಘ್ರವಾಗಿ ಪತ್ತೆ ಹಚ್ಚುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಘಟನೆ ನಡೆದ ಬಳಿಕ ಸಿಸಿ ಕ್ಯಾಮರಾವನ್ನು ಪರಿಶೀಲಿಸಿವಂತೆ ವಿದ್ಯಾಥಿಗಳೇ ಒತ್ತಾಯಿಸಿದರು. ಬೆಳಗ್ಗೆ ವಿದ್ಯಾರ್ಥಿನಿಯರನ್ನು ಕರೆದು ತೋರಿಸಿದ್ದಾರೆ. ಅದರಲ್ಲಿಯೂ ಸೂಕ್ತ ದಾಖಲೆಗಳಿರಲಿಲ್ಲ. ಆ ಭಾಗದ ಸಿಸಿಟಿವಿ ಕಾರ್ಯಚರಿಸದೇ ಇದ್ದರೂ, ಇತರೆ ಭಾಗದಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಿ ತಪ್ಪಿತಸ್ಥನ ವಿರುದ್ಧ ಕ್ರಮಕೈಗೊಳ್ಳಬಹುದಲ್ಲವೇ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕುಲಪತಿಗಳಿಂದ ಭರವಸೆ : ಘಟನೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶೀಘ್ರ ಕ್ರಮ ತೆಗೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕುಲಪತಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಸರಕಾರಿ ಕಾರ್ಯಕ್ರಮದ ನಿಮಿತ್ತ ಉಡುಪಿಗೆ ಭೇಟಿ ನೀಡಿದ ಪ್ರಭಾರ ಉಪ ಕುಲಪತಿ ಡಾ. ಕಿಶೋರ್ ಮಧ್ಯಾಹ್ನ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಭರವಸೆ ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪ್ರಕರಣವನ್ನು ವಿ.ವಿ. ಆಡಳಿತ ಗಂಭೀರವಾಗಿ ಪಡೆದುಕೊಂಡಿದೆ. ಸಿಸಿಟಿವಿ ದಾಖಲೆಗಳನ್ನು ಪಡೆದುಕೊಂಡಿದೆ. ಅದರಲ್ಲಿ ಪಡೆದ ಮಾಹಿತಿಯಂತೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ. ವಿದ್ಯಾರ್ಥಿನಿಯರು ಹೆಚ್ಚಾಗಿ ಅಡ್ಡ ರಸ್ತೆಯನ್ನು ಬಳಸದೆ ಮುಖ್ಯ ರಸ್ತೆಗಳಲ್ಲೇ ತೆರಳುವಂತೆ ಸೂಚಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಹಾಯಕ ಪೊಲೀಸ್ ಆಯುಕ್ತ ಎ. ರಾಮರಾವ್ ಅವರೂ ಸೂಕ್ತ ಮಾಹಿತಿ ಸಿಕ್ಕ ತಕ್ಷಣ ಆರೋಪಿಯನ್ನು ಬಂಧಿಸಲಾಗುವುದು. ಮುಂದೆ ವಿಶ್ವವಿದ್ಯಾನಿಲಯ ಕ್ಯಾಂಪಸ್ಸಿನಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಮಧ್ಯಾಹ್ನವರೆಗೆ ನಡೆಸಿದ ಪ್ರತಿಭಟನೆಯನ್ನು ಕೊನೆಗೊಳಿಸಿದರು.







