ದಕ್ಷಿಣ ಕೊರಿಯ ಜೊತೆಗಿನ ಸೇನಾ ಸಮರಾಭ್ಯಾಸ ಮುಂದುವರಿಕೆ: ಎಲ್ಲಾ ಸಾಧ್ಯತೆಗಳನ್ನು ಮುಕ್ತವಾಗಿಟ್ಟ ಟ್ರಂಪ್

ವಾಶಿಂಗ್ಟನ್, ಆ. 30: ದಕ್ಷಿಣ ಕೊರಿಯದ ಜೊತೆಗಿನ ಸೇನಾ ಸಮರಾಭ್ಯಾಸವನ್ನು ಮುಂದುವರಿಸುವ ಸಾಧ್ಯತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತವಾಗಿಟ್ಟಿದ್ದಾರೆ. ಈ ಹಂತದಲ್ಲಿ ಸಮರಾಭ್ಯಾಸಗಳಿಗೆ ಲಕ್ಷಾಂತರ ಡಾಲರ್ ಖರ್ಚು ಮಾಡಲು ಕಾರಣಗಳಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ, ಸೇನಾಭ್ಯಾಸದ ಅಗತ್ಯ ಬಿದ್ದರೆ, ಅದು ಹಿಂದೆಂದೂ ಇರದಷ್ಟು ಬೃಹತ್ ಪ್ರಮಾಣದಲ್ಲಿರುತ್ತದೆ ಎಂಬುದಾಗಿಯೂ ಅವರು ಹೇಳಿದ್ದಾರೆ. ಬುಧವಾರ ಮಾಡಿದ ಸರಣಿ ಟ್ವೀಟ್‌ಗಳಲ್ಲಿ ಟ್ರಂಪ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಕೊರಿಯ ತನ್ನ ಪರಮಾಣು ಕಾರ್ಯಕ್ರಮವನ್ನು ಕೊನೆಗೊಳಿಸುವಂತೆ ಮನವೊಲಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಆಗದಿರುವುದಕ್ಕೆ ಟ್ರಂಪ್ ಚೀನಾವನ್ನು ದೂರಿದ್ದಾರೆ.
ಟ್ರಂಪ್ ತನ್ನ ಟ್ವೀಟ್‌ಗಳ ಮೂಲಕ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ಗೆ ಸದ್ಭಾವನೆಯ ಸಂದೇಶವನ್ನೂ ಕಳುಹಿಸಿದ್ದಾರೆ ಹಾಗೂ, ಅದೇ ವೇಳೆ, ಸೇನಾ ಕಾರ್ಯಾಚರಣೆಯ ಪರೋಕ್ಷ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಹೇಳಲಾಗಿದೆ.
ಜೂನ್‌ನಲ್ಲಿ ಸಿಂಗಾಪುರದಲ್ಲಿ ಕಿಮ್ ಜಾಂಗ್ ಉನ್ ಜೊತೆಗೆ ಶೃಂಗ ಸಮ್ಮೇಳನ ನಡೆಸಿದ ಬಳಿಕ, ಟ್ರಂಪ್ ದಕ್ಷಿಣ ಕೊರಿಯ ಜೊತೆಗಿನ ಜಂಟಿ ಸಮರಾಭ್ಯಾಸವನ್ನು ಸ್ಥಗಿತಗೊಳಿಸಿದ್ದರು.
ಅಮೆರಿಕದ ಬೇಜವಾಬ್ದಾರಿ ವರ್ತನೆ ಕಾರಣ: ಚೀನಾ
ಬೀಜಿಂಗ್, ಆ. 30: ಉತ್ತರ ಕೊರಿಯ ಜೊತೆಗಿನ ಮಾತುಕತೆ ವಿಫಲಗೊಳ್ಳಲು ಅಮೆರಿಕದ ‘ಬೇಜವಾಬ್ದಾರಿಯುತ ಹಾಗೂ ಅಸಂಬದ್ಧ ತರ್ಕ’ವೇ ಕಾರಣ ಎಂದು ಚೀನಾ ಗುರುವಾರ ಆರೋಪಿಸಿದೆ.
ಉತ್ತರ ಕೊರಿಯ ಜೊತೆಗಿನ ಅಮೆರಿಕದ ಸಂಬಂಧವನ್ನು ಕ್ಲಿಷ್ಟಕರಗೊಳಿಸಿದ್ದು ಚೀನಾ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಚೀನಾ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.
‘‘ಬೇರೆಯವರ ಮೇಲೆ ಆರೋಪ ಹೊರಿಸುವ ಬದಲು, ಸಮಸ್ಯೆಯನ್ನು ಪರಿಹರಿಸಲು ಅಮೆರಿಕ ತನ್ನನ್ನೇ ನೋಡಿಕೊಳ್ಳಬೇಕು’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಇಲ್ಲಿ ನಡೆದ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.







