ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಷೇಧ: ಬಿಬಿಎಂಪಿ ಆಯುಕ್ತರಿಂದ ಆದೇಶ ಜಾರಿ

ಬೆಂಗಳೂರು, ಆ.30: ಸಾರ್ವಜನಿಕ ಸ್ಥಳಗಳು, ಹೊಟೇಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧಿಸಬೇಕೆಂದು ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿರುವುದು ಜಾಗತಿಕ ವಯಸ್ಕ ತಂಬಾಕು ಸರ್ವೆ-2 (ಜಿಎಟಿಎಸ್)ಯಿಂದ ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳು, ಹೊಟೇಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಷೇಧಿಸಬೇಕೆಂಬ ಆದೇಶ ಹೊರಡಿಸಲಾಗಿದೆ.
ಪರೋಕ್ಷ ಧೂಮಪಾನದಿಂದ ಮಹಿಳೆಯರು ಹಾಗೂ ಮಕ್ಕಳ ಮೇಲಿನ ಪರಿಣಾಮ ತಡೆಯುವ ಉದ್ದೇಶದಿಂದ ಪ್ರತಿಯೊಂದು 30 ಕ್ಕಿಂತ ಹೆಚ್ಚಿನ ಆಸನಗಳಿರುವ ಬಾರ್ ಹಾಗೂ ರೆಸ್ಟೋರೆಂಟ್, ಹೊಟೇಲ್, ಪಬ್ ಹಾಗೂ ಕ್ಲಬ್‌ಗಳಲ್ಲಿ ಧೂಮಪಾನ ಪ್ರದೇಶ ನಿರ್ಮಿಸಲು ಅವಕಾಶ ನೀಡಲಾಗಿದೆ. ಇಂತಹ ಪ್ರದೇಶ ನಿರ್ಮಾಣ ವೇಳೆ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ -2003 (ಕೋಟಾ) ಪ್ರಕಾರ ಧೂಮಪಾನ ಪ್ರದೇಶಕ್ಕೆ ಅಪ್ರಾಪ್ತರಿಗೆ ಹಾಗೂ ಧೂಮಪಾನ ಮಾಡದವರಿಗೆ ಪ್ರವೇಶ ನೀಡಬಾರದು. ಜತೆಗೆ ಯಾವುದೇ ರೀತಿಯ ತಿಂಡಿ, ಊಟ, ಮದ್ಯ, ಸಿಗರೇಟು, ನೀರು, ಟೀ-ಕಾಫಿ ಇತ್ಯಾದಿ ತಿಂಡಿ ಪದಾರ್ಥಗಳನ್ನು ಸರಬರಾಜು ಅಥವಾ ಸೇವೆ ನೀಡಬಾರದು ಎಂದು ನಿಯಮ ವಿಧಿಸಲಾಗಿದೆ. ಅಲ್ಲದೆ, ಧೂಮಪಾನ ಪ್ರದೇಶದಲ್ಲಿ ಕುರ್ಚಿ ಅಥವಾ ಟೇಬಲ್, ಬೆಂಕಿ ಪೊಟ್ಟಣ ಇತ್ಯಾದಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಬಾರದು. ಜತೆಗೆ ಇಂತಹ ಪ್ರದೇಶ ನಿರ್ಮಿಸಲು ಪಾಲಿಕೆಯ ತಂಬಾಕು ನಿಯಂತ್ರಣ ಕೋಶದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಲೈಸೆನ್ಸ್ ರದ್ದು: ಕರ್ನಾಟಕದ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವುದರಿಂದ ಬೆಂಕಿ ಅವಘಡಗಳಿಂದ ಸಾರ್ವಜನಿಕರನ್ನು ರಕ್ಷಿಸಬಹುದು ಎಂದು ಹೇಳಿದೆ. ಹೀಗಾಗಿ ಬಾರ್, ರೆಸ್ಟೋರೆಂಟ್, ಹೊಟೇಲ್, ಪಬ್ ಹಾಗೂ ಕ್ಲಬ್‌ಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶವನ್ನು ಸ್ಥಾಪಿಸದಿದ್ದರೆ ಅಂತಹ ಉದ್ದಿಮೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದ್ದು, ಅಂತಹವರ ಉದ್ದಿಮೆ ಪರವಾನಿಗೆ ರದ್ದುಪಡಿಸಲಾಗುವುದು ಎಚ್ಚರಿಸಲಾಗಿದೆ.
ತಂಬಾಕು ಸರ್ವೆಯಲ್ಲಿನ ಪ್ರಮುಖ ಅಂಶಗಳು
-ಧೂಮಪಾನದಿಂದ ಪರೋಕ್ಷವಾಗಿ ಶೇ.60 ಜನರಿಗೆ ತೊಂದರೆ.
-ಶೇ.23.9 ರಷ್ಟು ಜನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಾರೆ.
-ರಾಜ್ಯದಲ್ಲಿ ತಂಬಾಕು ಉತ್ಪನ್ನ ಬಳಕೆದಾರರ ಸಂಖ್ಯೆ-1.50 ಕೋಟಿ.
-ಕಳೆದ ಏಳು ವರ್ಷದಲ್ಲಿ ರಾಜ್ಯದಲ್ಲಿ ತಂಬಾಕು ತ್ಯಜಿಸಿದವರ ಸಂಖ್ಯೆ-35 ಲಕ್ಷ
-ದೇಶದಲ್ಲಿ ತಂಬಾಕು ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟವರ ಸಂಖ್ಯೆ-10ಲಕ್ಷ -ವಿಶ್ವದಾದ್ಯಂತ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ-13.5 ಲಕ್ಷ







