ಠೇವಣಿ ಹಣ ಹಿಂತಿರುಗಿಸದ ಚೆನ್ನೈ ಆರ್‌ಬಿಐ: ನಿವೃತ್ತ ಅಧಿಕಾರಿ ಪೂಜಾರ್ ಆರೋಪ
ಬೆಂಗಳೂರು, ಆ.30: 500 ಮತ್ತು 1000 ನೋಟುಗಳ ಅಮಾನ್ಯೀಕರಣದ ನಂತರ ಚೆನ್ನೈನ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ ಹಣವನ್ನು ವಾಪಸು ನೀಡಿಲ್ಲ ಎಂದು ನಿವೃತ್ತ ಸಹಾಯಕ ಖಜಾನೆ ಅಧಿಕಾರಿ ಆರೋಪಿಸಿದ್ದಾರೆ.
ಗುರುವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಮಾಡುವ ಆದೇಶ ಬಂದಾಗ ನಾನು ವಿದೇಶಕ್ಕೆ ಹೋಗಿದ್ದೆ. ಹಾಗಾಗಿ ಆಜ್ಞೆಯಾಗಿದ್ದ ದಿನಾಂಕಕ್ಕೆ ಹಳೆ ನೋಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಸರಕಾರ ನೋಟು ವಿನಿಮಯ ದಿನವನ್ನು ವಿಸ್ತರಿಸಿತ್ತು. ಅದರಂತೆ 2017 ರ ಮಾರ್ಚ್ 1ರಂದು ನಾನು ಚೆನ್ನೈ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದೇನೆ. ಅಷ್ಟೇ ಅಲ್ಲದೆ, ಬೆಂಗಳೂರಿನ ಆರ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ ನೋಟು ವಿನಿಮಯಕ್ಕೆ ಅವಕಾಶ ನೀಡಿರಲಿಲ್ಲ, ದೇಶದಲ್ಲೇ 6 ಪ್ರಾದೇಶಿಕ ಕೇಂದ್ರಗಳಿಗೆ ಮಾತ್ರ ಅವಕಾಶವಿತ್ತು. ಅದರಂತೆ ಚೆನ್ನೈನಲ್ಲಿ ಠೇವಣಿ ಮಾಡಿದ್ದೆ ಎಂದರು.
ಎಸ್‌ಬಿಐ ಹಾಗೂ ಎಸ್‌ಬಿಎಂಗಳ ಖಾತೆಯ ವಿವರಗಳನ್ನು ಹಾಗೂ ವಿನಿಮಯಕ್ಕಾಗಿ ಯಾವುದೇ ಹಣವನ್ನು 2016ರ ನ.10ರಿಂದ ಡಿ.12ರ ವರೆಗೆ ಜಮಾ ಮಾಡದಿದ್ದ ಬಗ್ಗೆ ಪತ್ರಗಳನ್ನು ಆರ್‌ಬಿಐ ಚೆನ್ನೈನ ಅಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದರು.
ನೋಟುಗಳ ವಿನಿಮಯದ ಲಾಭವನ್ನು ಈಗಾಗಲೇ ಪಡೆದಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ, ಹಣವನ್ನೂ ವಾಪಸ್ ನೀಡಿಲ್ಲ, ಒಂದು ವರ್ಷದಲ್ಲಿ ಹಣ ನೀಡಲು ನಿರಾಕರಿಸಿದರೆ, ಅಮರಣಾಂತ ಉಪವಾಸ ಮಾಡುವುದಾಗಿ ಹೇಳಿದರು. ಕೇಂದ್ರ ಸರಕಾರ ಅಥವಾ ಆರ್ಥಿಕ ಇಲಾಖೆ ಮಧ್ಯಸ್ಥಿಕೆ ವಹಿಸಿಕೊಂಡು ಹಣ ಕೊಡಿಸಿಕೊಡಿ ಎಂದು ಸರಕಾರವನ್ನು ಮನವಿ ಮಾಡಿದರು.







