ಹನೂರು: ಗೂಡ್ಸ್ ಆಟೋ ಪಲ್ಟಿ; ಹಲವರಿಗೆ ಗಾಯ

ಹನೂರು,ಆ.30: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಪಲ್ಟಿ ಹೊಡೆದ ಪರಿಣಾಮ ಹಲವು ಮಂದಿಗೆ ಗಾಯಗಳಾದ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯ ಲೊಕ್ಕನಹಳ್ಳಿ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಮಾದಮ್ಮ (70) ಮಾದೇವ (50) ಭಾಗ್ಯ (45) ರಾಚಯ್ಯ (60) ತೋಳಸಮ್ಮ (60) ರಾಣಮ್ಮ (40) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಂಬಂಧಿಕರ ಶವ ಸಂಸ್ಕಾರಕ್ಕೆಂದು ಚಿಕ್ಕಮಾಲಾಪುರ ಗ್ರಾಮದಿಂದ ಹನೂರು ಸಮೀಪ ಇರುವ ಅಜ್ಜೀಪುರ ಗ್ರಾಮಕ್ಕೆ 16 ಮಂದಿ ಗೂಡ್ಸ್ ಆಟೋದಲ್ಲಿ ಬರುತ್ತಿರುವಾಗ ಹನೂರು-ಲೊಕ್ಕನಹಳ್ಳಿ ರಸ್ತೆ ಮಾರ್ಗ ಹುಬ್ಬೆ ಹುಣಸೇ ಡ್ಯಾಂ ಬಳಿ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ ಪಲ್ಟಿ ಹೊಡೆದಿದೆ ಎಂದು ತಿಳಿದುಬಂದಿದೆ. ಹನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಆಸ್ಪತ್ರೆಗೆ ಭೇಟಿ: ಹನೂರು ಶಾಸಕ ನರೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಸಂದರ್ಶಿಸಿದರು.





