‘ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದವರಿಗೆ ಬೆಲೆ ಇಲ್ಲ’
ಉಡುಪಿ, ಆ.30: ಕಳೆದ 35-40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೆ. ಅದೇ ರೀತಿ ನನ್ನ ತಂದೆ ಕಪ್ಪೆಟ್ಟು ಮುದ್ದಣ್ಣ ಶೆಟ್ಟಿ ಅವರು ಸಹ 60ವರ್ಷಕ್ಕೂ ಮಿಕ್ಕಿದ ಸೇವೆಯನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ನಿಸ್ವಾರ್ಥ ಮತ್ತು ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಯನ್ನು ನಾವು ಮಾಡಿಕೊಂಡು ಬಂದಿದ್ದೇವೆ ಎಂದು ಈ ಬಾರಿ ಉಡುಪಿ ನಗರಸಭಾ ಚುನಾವಣೆಯಲ್ಲಿ ಅಂಬಲಪಾಡಿ ವಾರ್ಡಿನಿಂದ ಕಾಂಗ್ರೆಸ್‌ಗೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಉಚ್ಛಾಟಿತರಾಗಿರುವ ಕಪ್ಪೆಟ್ಟು ಸುರೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಕಳೆದಬಾರಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಭ್ಯರ್ಥಿ ಯ ಸೋಲಿಗೆ ಕಾರಣರಾದವರಿಗೆ ಹಾಗೂ ಕಳೆದ 10 ವರ್ಷಗಳಿಂದ ನಿಷ್ಕೃಿಯ ರಾಗಿ ಪಕ್ಷ ಮತ್ತು ಜನರಿಗೆ ದೊರವಾಗಿದ್ದ ವ್ಯಕ್ತಿಗೆ ಕೇವಲ ಹಣಬಲ ಮತ್ತು ಪ್ರಭಾವಿ ನಾಯಕರ ಪ್ರಭಾವವನ್ನು ಮಾನದಂಡ ಮಾಡಿಕೊಂಡು ಟಿಕೇಟ್ ನೀಡಿರುವುದನ್ನು ವಿರೋಧಿಸಿ ತಾನು ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿದ್ದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಕ್ಷದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ಕಡೆಗಣಿಸಿದ್ದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹುದ್ದೆಗೆ ಗೌರವಯುತವಾಗಿ ರಾಜೀನಾಮೆ ನೀಡಿ ಅನಂತರ ಪಕ್ಷೇತರನಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುತ್ತೇನೆ. ಈ ರಾಜೀನಾಮೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮುಖತಃ ಭೇಟಿಯಾಗಿ ನೀಡಿದ ಮೇಲೂ ಬ್ಲಾಕ್ ಅಧ್ಯಕ್ಷರು ಉಚ್ಚಾಟನೆ ಮಾಡಿದ್ದೇವೆ ಎಂಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದ್ದಾರೆ.







