ಮರಳಿಗಾಗಿ ಪ್ರಮೋದ್ ಧರಣಿ ನಡೆಸಿದರೆ ನಾನೂ ಭಾಗವಹಿಸುತ್ತೇನೆ: ರಘುಪತಿ ಭಟ್
ಉಡುಪಿ, ಆ.30: ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಿಗಡಾಯಿಸಿದ್ದೇ ಪ್ರಮೋದ್ ಮಧ್ವರಾಜ್ ಶಾಸಕ-ಸಚಿವರಾಗಿದ್ದ ಅವಧಿಯಲ್ಲಿ. ಈಗ ಅವರು ಮರಳಿಗಾಗಿ ಒತ್ತಾಯಿಸಿ ಸೆ.1ರಿಂದ ಪಕ್ಷಾತೀತವಾಗಿ ಧರಣಿ, ಪ್ರತಿಭಟನೆ ಆರಂಭಿಸಿದರೆ, ಅದರಲ್ಲಿ ನಾನು ಖಂಡಿತವಾಗಿ ಭಾಗವಹಿಸುತ್ತೇನೆ. ಸಮಸ್ಯೆ ಬಗೆ ಹರಿಯು ವವರೆಗೆ ಹಗಲು-ರಾತ್ರಿ ಇದರಲ್ಲಿ ಪಾಲ್ಗೊಳ್ಳಲು ಸಿದ್ಧನಿದ್ದೇನೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಟ್, ನಿನ್ನೆ ಪ್ರಮೋದ್ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು. ನಾನು ಶಾಸಕನಾಗಿ ಆಯ್ಕೆಯಾದ ಒಂದು ತಿಂಗಳಲ್ಲಿ ಮರಳು ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಸಮಯ ನೀಡಿರಲಿಲ್ಲ. ಶಾಸಕನಾಗಿ ಮೊದಲ ದಿನದಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದಿದ್ದೆ. ಅದನ್ನು ಈಗ ಮಾಡುತ್ತಲೂ ಇದ್ದೇನೆ ಎಂದರು.
ತಾನು ಶಾಸಕನಾದ ದಿನದಿಂದ ಈವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಈ ಬಗ್ಗೆ ಚರ್ಚಿಸಿದ್ದೇನೆ. ಗಣಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ. ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮರಳಿನ ಕುರಿತು ಸಭೆ ನಡೆಸಿ ಕೂಡಲೇ ಮರಳು ದಿಬ್ಬವನ್ನು ಗುರುತಿಸುವ ಕೆಲಸ ಮಾಡುವಂತೆ ಒತ್ತಾಯಿಸಿದ್ದಲ್ಲದೇ ಇಲ್ಲದಿದ್ದರೆ ಪ್ರತಿಭಟನೆ ನಡೆಸು ವುದಾಗಿ ಹೇಳಿದ್ದೆ. ಇದಕ್ಕೆ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ ಬೆಂಬಲ ನೀಡಿದ್ದಾರೆ. ಇದರ ಪರಿಣಾಮ ಜಿಲ್ಲಾಧಿಕಾರಿಗಳು ಏಳು ಮಂದಿಯ ಮರಳು ಸಮಿತಿಯನ್ನು ರಚಿಸಿದ್ದಾರೆ. ಆ.28ರಂದು ನಡೆದ ಸಮಿತಿಯ ಎರಡನೇ ಸಭೆಯಲ್ಲಿ ಮೀನುಗಾರರಿಂದ ಅರ್ಜಿಗಳನ್ನು ಕರೆದು ಮರಳು ದಿಬ್ಬಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಇದೀಗ ಜಿಲ್ಲಾಧಿಕಾರಿಗಳು ಮಂಗಳೂರಿನಲ್ಲಿರುವಂತೆ ಇಲ್ಲೂ ಮರಳು ದಿಬ್ಬಕ್ಕಾಗಿ ಬೆಥೋಮೆಟಿಕಲ್ ಸರ್ವೆ ನಡೆಸಲು ಮುಂದಾಗಿದ್ದು, ಇದನ್ನು ತಾನು ವಿರೋಧಿಸಿದ್ದಾಗಿ ರಘುಪತಿ ಭಟ್ ನುಡಿದರು. ಇಲ್ಲಿ ಮರಳುಗಾರಿಕೆಯನ್ನು ಗುತ್ತಿಗೆ ನೀಡುವುದಕ್ಕೂ ತಮ್ಮ ತೀವ್ರ ವಿರೋಧವಿದ್ದು, ಈ ಮುಂಚಿನಂತೆ ದಿಬ್ಬವನ್ನು ವೈಯಕ್ತಿಕ ಲೀಸ್‌ಗೆ ನೀಡಬೇಕು ಎಂದರು.
ಮರಳುಗಾರಿಯ ಎಲ್ಲಾ ಸಮಸ್ಯೆ ಪ್ರಾರಂಭಗೊಂಡಿದ್ದೇ ಹಿಂದಿನ ಸರಕಾರದ ಅವಧಿಯಲ್ಲಿ. ಇದಕ್ಕೆ ಸಚಿವರಾಗಿ ಪ್ರಮೋದ್‌ರ ವೈಫಲ್ಯವೇ ಕಾರಣ. ಇದನ್ನು ಬಗೆಹರಿಸಲು ತಾವು ಶಕ್ತಿಮೀರಿ ಪ್ರಯತ್ನಿಸುತ್ತಿರುವುದಾಗಿ ಭಟ್ ನುಡಿದರು.
ನಗರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಆಡಳಿತವಿರುವವರೆಗೆ ಕುಡಿಯುವ ನೀರಿನ ಸಮಸ್ಯೆಯೇ ಇರಲಿಲ್ಲ. 2012ರಲ್ಲಿ ಮಳೆ ಜೂ.17ರಂದು ಬಂದಿದ್ದರೂ, ತಾವು ಜನರಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸಿದ್ದೇವೆ. ಆ ಬಳಿಕ ಟ್ಯಾಂಕರ್ ನೀರಿನ ಸರಬರಾಜಿಗಾಗಿ ಸಮಸ್ಯೆ ಸೃಷ್ಟಿಯಾಯಿತು. ನಗರದಲ್ಲಿ ನೀರಿನ ಸಂಪರ್ಕ 10,000ದಷ್ಟು ಹೆಚ್ಚಿದರೂ ಪಂಪ್‌ನ ಸಾಮರ್ಥ್ಯ ಹಾಗೂ ಶುದ್ಧೀಕರಣ ಘಟಕದ ಸಾಮರ್ಥ್ಯವನ್ನು ಹೆಚ್ಚಿಸದೇ ಸಮಸ್ಯೆ ಬಿಗಡಾಯಿತುತ್ತಿದೆ ಎಂದರು. ಇದರಿಂದ ಈಗ ಮಳೆಗಾಲದಲ್ಲೂ ನಗರವಾಸಿಗಳಿಗೆ ಕೇವಲ 3-4ಗಂಟೆ ನೀರು ಸಿಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಉಪೇಂದ್ರ ನಾಯಕ್, ಪ್ರಭಾಕರ ಪೂಜಾರಿ, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.







