ತುಮಕೂರು: ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಾಗಾರ

ತುಮಕೂರು,ಆ.28: ತುಮಕೂರು ಜಿಲ್ಲೆಯಲ್ಲಿ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತೊಡೆದು ಹಾಕಲು ವಿವಿಧ ಸಮುದಾಯಗಳ ಮುಖಂಡರ ಹಾಗೂ ಸಾರ್ವಜನಿಕರ ಸಹಕಾರ ಅತಿಮುಖ್ಯ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಂಘ, ಬಾಲ ಭವನ ಸೊಸೈಟಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು, ಕಲ್ಯಾಣ ಮಂಟಪ ಮತ್ತು ಮುದ್ರಣಾಲಯ ಮಾಲೀಕರಿಗಾಗಿ ಏರ್ಪಡಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿವಿಧ ಸಮುದಾಯಗಳಲ್ಲಿ ಹಾಗೂ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಆಯಾ ಸಮುದಾಯಗಳ ಮುಖಂಡರ ಸಹಕಾರ ಅತಿಮುಖ್ಯ. ಆಗ ಮಾತ್ರ ಇಂತಹ ಸಾಮಾಜಿಕ ಪದ್ಧತಿಗಳ ನಿಷೇಧ ಸಾಧ್ಯವಗುತ್ತದೆ. ಈ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದರು.
ಬಾಲ್ಯವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಲವಾರು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 100ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ನಡೆಯದಂತೆ ತಡೆಯಬೇಕು. ಈ ಕುರಿತು ಪೋಷಕರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಸಿಇಓ ನುಡಿದರು.
ತುಮಕೂರು ನಗರ ಡಿವೈಎಸ್ಪಿ ನಾಗರಾಜ್ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ತುಂಬಾ ಪರಿಣಾಮಕಾರಿ ಕಾಯ್ದೆಯಾಗಿದ್ದು, ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸುವುದು ಅನಿವಾರ್ಯವಾಗಿದೆ. ದೆಹಲಿ ನಿರ್ಭಯ ಪ್ರಕರಣದ ನಂತರ ಕಾನೂನಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹಗಳು ಗುರುತರ ಅಪರಾಧಗಳಾಗಿವೆ. ಅಲ್ಲದೆ ಶಿಕ್ಷೆಯಲ್ಲಿಯೂ ಮಾರ್ಪಾಡುಗಳಾಗಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಎಸ್.ನಂದಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ. ಜಿ.ಪಿ.ದೇವರಾಜು, ಜಿಲ್ಲಾ ಪರಿಶಿಷ್ಟ ವರ್ಗಗಗಳ ಕಲ್ಯಾಣಾಧಿಕಾರಿ ರಾಜಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗರತ್ನ ಎಸ್., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ ಮುಂತಾದವರು ಹಾಜರಿದ್ದರು.







