ಕಮರ್ಷಿಯಲ್ ಪ್ರಕರಣಗಳಿಗೆ ಪ್ರತ್ಯೇಕ ರಾಜ್ಯ ಮಟ್ಟದ ನ್ಯಾಯಾಲಯ: ಆದೇಶ ಹಿಂಪಡೆಯಲು ಒತ್ತಾಯಿಸಿ ಮನವಿ
ಚಿಕ್ಕಮಗಳೂರು, ಆ.30: ಮೂರು ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಮರ್ಷಿಯಲ್ ಪ್ರಕರಣಗಳನ್ನು ಪ್ರತ್ಯೇಕ ರಾಜ್ಯ ಮಟ್ಟದ ನ್ಯಾಯಾಲಯಕ್ಕೆ ವಹಿಸಿರುವ ಕೇಂದ್ರ ಸರಕಾರದ ಕಾನೂನು ತಿದ್ದುಪಡಿ ಹಾಗೂ ಇಡೀ ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚಿನ ಮೊತ್ತದ ವಿವಾದಗಳ ಕಮರ್ಷಿಯಲ್ ಪ್ರಕರಣಗಳನ್ನು ಪ್ರತ್ಯೇಕ 3 ಕಮರ್ಷಿಯಲ್ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಿಸಲು ಸೂಚಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಚಿಕ್ಕಮಗಳೂರು ವಕೀಲರ ಸಂಘ ತುರ್ತುಸಭೆ ಸೇರಿ ರಾಜ್ಯ ಹೈಕೋರ್ಟ್ ಮತ್ತು ಸರಕಾರವನ್ನು ಒತ್ತಾಯಿಸಿದೆ.
ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರಾದ ಬಿ.ಟಿ. ದುಷ್ಯಂತ್ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಗ್ಗೆ ವಕೀಲರ ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರಾದ ಮಹೇಶ್ ಕುಮಾರ್, ಬಿ.ಎನ್.ನಾಗಭೂಷಣ್, ಕೆ.ಸಿ.ಕೃಷ್ಣಮೂರ್ತಿ, 3 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಎಲ್ಲಾ ಹಣಕಾಸಿನ ವ್ಯವಹಾರಗಳ ದಾವೆಗಳು ಪ್ರತ್ಯೇಕ ಕಮರ್ಷಿಯಲ್ ಕೋರ್ಟಿನ ವ್ಯಾಪ್ತಿಗೆ ಬರಲಿದ್ದು, ಇದರಿಂದ ಸಾಧಾರಣ ಪ್ರಕರಣಗಳಲ್ಲಿನ ಕಕ್ಷಿದಾರರು ಮತ್ತು ಸ್ಥಳೀಯ ವಕೀಲರುಗಳಿಗೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಕೀಲರುಗಳ ಸಮಸ್ಯೆಯನ್ನು ಆಲಿಸಿದ ರಾಷ್ಟ್ರೀಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷ, ಹಾಲಿ ರಾಜ್ಯ ವಕೀಲರ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಮಾತನಾಡಿ, ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ರಾಜ್ಯ ಹೈಕೋರ್ಟ್ ಗಮನ ಸೆಳೆಯಲು ನಿಯೋಗ ಕರೆದೊಯ್ಯುವುದಾಗಿ ತಿಳಿಸಿದರು.
ಸಂಸತ್‍ನಲ್ಲಿ ಕಾನೂನೂ ರಚನೆ ಹಾಗೂ ತಿದ್ದುಪಡಿಗಳ ಸಂದರ್ಭದಲ್ಲಿ ಕಾನೂನೂ ಹಾಗೂ ವಿಷಯ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಅದು ಆಗುತ್ತಿಲ್ಲ. ಇಂತಹ ಗಂಭೀರ ವಿಷಯಗಳಲ್ಲಿ ವಕೀಲರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದಿರುವುದರಿಂದ ಈ ರೀತಿ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ತಿಳಿಸಿದರು.
ಇದೊಂದು ರಾಜ್ಯಮಟ್ಟದ ಸಮಸ್ಯೆಯಾಗಿದೆ. ಜಿಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಕನಿಷ್ಟ ಒಂದು ಕಮರ್ಷಿಯಲ್ ನ್ಯಾಯಾಲಯವನ್ನು ನೀಡುವ ಕುರಿತು ಸರಕಾರ ಮತ್ತು ಹೈಕೋರ್ಟ್ ಗಮನಕ್ಕೆ ತಂದು ಮನವಿ ಮಾಡಲಾಗುವುದು ಎಂದು ಭರವಸೆ ನೀಡಿ ಈ ಕುರಿತಾದ ಮನವಿಯನ್ನು ಸ್ವೀಕರಿಸಿದರು.
ಚಿಕ್ಕಮಗಳೂರು ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ.ರಾಜೇಶ್, ವಕೀಲರುಗಳಾದ ಡಿ.ಬಿ.ಸುಜೇಂದ್ರ,ಬಿ.ಹೆಚ್.ಹೇಮಂತ್ ಕುಮಾರ್ ತೇಜಸ್ವಿ ಮುಂತಾದವರು ಉಪಸ್ಥಿತರಿದ್ದರು.