ಚಿಕ್ಕಮಗಳೂರು: ಕೆರೆಗೆ ಉರುಳಿದ ಕಾರು; ಚಾಲಕನಿಗೆ ಗಾಯ

ಚಿಕ್ಕಮಗಳೂರ, ಆ.30: ನಗರದ ಬಸವನಹಳ್ಳಿ ಕೆರೆಗೆ ಗುರುವಾರ ಬೆಳಗ್ಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಕಾರು ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ ಚಿಕ್ಕಮಗಳೂರ ನಗರದಿಂದ ಕಡೂರು ರಸ್ತೆಯಲ್ಲಿ ತೆರಳುತ್ತಿದ್ದ ಕಾರು ದಂಟರಮಕ್ಕಿ ಬಡಾವಣೆ ಸಮೀಪ ಕೆರೆ ದಂಡೆ ಮೇಲೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ. ಘಟನೆ ವೇಳೆ ಕಾರು ಸಹಿತ ಚಾಲಕ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ ಸ್ಥಳೀಯರು ನೆರವಿಗೆ ಧಾವಿಸಿ ಗಾಯಗೊಂಡಿದ್ದ ಚಾಲಕನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ಬಸವನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ನೀರಿನಲ್ಲಿ ಕೆರೆ ನೀರಿನಲ್ಲಿ ಮುಳುಗುತ್ತಿದ್ದ ಕಾರನ್ನು ಮೇಲೆತ್ತಿದ್ದಾರೆಂದು ತಿಳಿದು ಬಂದಿದೆ
ಕೆರೆ ದಂಡೆಯ ಮೇಲೆ ತಡೆಗೋಡೆಗಳಿಲ್ಲದಿರುವುದು ಘಟನೆಗೆ ಕಾರಣವಾಗಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಬಸವನಹಳ್ಳಿ ಕೆರೆ ದಂಡೆಯ ರಸ್ತೆಗಳ ಎರಡೂ ಬದಿಗಳಲ್ಲೂ ವಾಹನ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಡೆಗೋಡಗಳನ್ನು ನಿರ್ಮಿಸಬೇಕೆಂದು ವಾಹನ ಚಾಲಕರು ಮನವಿ ಮಾಡಿದ್ದಾರೆ.





