ಕೊಡಗು ಮಳೆಹಾನಿ: ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಹರ ಸಾಹಸ
600 ಕ್ಕೂ ಅಧಿಕ ಮಂದಿ ಸೆಸ್ಕ್ ಸಿಬ್ಬಂದಿಗಳಿಂದ ಹಗಲಿರುಳು ಕಾರ್ಯಾಚರಣೆ

ಮಡಿಕೇರಿ, ಆ.30 : ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ಮರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಅದರಲ್ಲೂ ವಿಶೇಷವಾಗಿ ಆಗಸ್ಟ್15ರ ಬಳಿಕ ಪ್ರಕೃತಿ ವಿಕೋಪದಿಂದ ವಿದ್ಯುತ್ ವಿತರಣಾ ಜಾಲದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ವಿದ್ಯುತ್ ಕಂಬಗಳು ತುಂಡಾಗಿ ಪರಿವರ್ತಕಗಳು ವಿಫಲಗೊಂಡು, ಪರಿವರ್ತಕ ಕೇಂದ್ರಗಳು ಉರುಳಿ ಬಿದ್ದು, ವಿದ್ಯುತ್ ತಂತಿಗಳು ಕಡಿದು ಬಿದ್ದು, ವಿದ್ಯುತ್ ಪರಿಕರಗಳು ಮಳೆಯಿಂದ ಕೊಚ್ಚಿ ಹೋಗಿ ಸುಮಾರು 5 ಕೋಟಿ ರೂ.ಗೂ ಹೆಚ್ಚಿನ ಹಾನಿ ಸಂಭವಿಸಿತ್ತು.
ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 3641 ವಿದ್ಯುತ್ ಕಂಬಗಳು ಹಾನಿಗೆ ಒಳಗಾಗಿದ್ದು, ಈ ಪೈಕಿ 3026 ಕಂಬಗಳನ್ನು ಮರುಸ್ಥಾಪನೆ ಮಾಡಲಾಗಿದೆ. 284 ಪರಿವರ್ತಕಗಳ ಪೈಕಿ 227 ಪರಿವರ್ತಕಗಳನ್ನು ಅಳವಡಿಸಲಾಗಿದ್ದು, 61.66 ಕಿ.ಮೀ.ನಷ್ಟು ಹಾನಿಗೊಳಗಾದ ವಿದ್ಯುತ್ ಮಾರ್ಗದ ಪೈಕಿ, 42.13 ಕಿ.ಮೀ. ವಿದ್ಯುತ್ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಸೆಸ್ಕ್ ನ ಮಡಿಕೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವಯ್ಯ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿಯಿಂದ ಮಡಿಕೇರಿ ತಾಲೂಕಿನ 49, ಸೋಮವಾರಪೇಟೆ ತಾಲೂಕಿನ 48 ಹಾಗೂ ವೀರಾಜಪೇಟೆ ತಾಲ್ಲೂಕಿನ 43 ಗ್ರಾಮ ಮತ್ತು ಉಪ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಹಾನಿಯುಂಟಾಗಿತ್ತು. ಈ ಪೈಕಿ ಮಡಿಕೇರಿ ಪಟ್ಟಣ ವ್ಯಾಪ್ತಿಯ ಹಲವೆಡೆ ಅತೀ ಹೆಚ್ಚಿನ ಹಾನಿಯುಂಡಾಗಿದ್ದು, ಈ ಪೈಕಿ, ಮುಕ್ಕೋಡ್ಲು, ಮಕ್ಕಂದೂರು, ಹೆಮ್ಮೆತ್ತಾಳು, ಹಚ್ಚಿನಾಡು, ಹೊದಕಾನ, ಆವಂಡಿ, ಮುಟ್ಲು, ತಂತಿಪಾಲ, ಕಾಲೂರು, ಬಾರಿಬೆಳ್ಳಚ್ಚು, ವಣಚಲು, 2ನೇ ಮೊಣ್ಣಂಗೇರಿ, ಹಮ್ಮಿಯಾಲ, ದೇವಸ್ತೂರು, ಜೋಡುಪಾಲ, ಬೆಟ್ಟತ್ತೂರು ಸೇರಿದಂತೆ 16 ಗ್ರಾಮಗಳು ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಬಾಕಿ ಉಳಿದಿವೆ ಎಂದು ಅವರು ವಿವರಿಸಿದರು.
ಸಂಪಾಜೆ, ಜೋಡುಪಾಲ, ಮದೆನಾಡು ಮತ್ತು ದೇವರಕೊಲಲಿ ವಿಭಾಗಗಳಿಗೆ ಸುಳ್ಯ ಭಾಗದಿಂದ ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಸಹಕಾರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು, ಈಗಾಗಲೆ ಜೋಡುಪಾಲದ ವರೆಗೆ ಸಂಪರ್ಕವನ್ನು ಒದಗಿಸಲಾಗಿದೆ ಎಂದರು.
ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನ ಕುಶಾಲನಗರದ 48 ಗ್ರಾಮ ಮತ್ತು ಉಪ ಗ್ರಾಮಗಳಲ್ಲಿ ತೀವ್ರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಈ ಪೈಕಿ, ಹಟ್ಟಿಹೊಲೆ, ಕಾಂಡನಕಜೊಳ್ಳಿ, ಗರ್ವಾಲೆ, ಸುರ್ಲಬ್ಬಿ, ಶಿರಂಗಳ್ಳಿ , ಕೊಟೆ ಬೆಟ್ಟ, ಕಿರುದಾಲೆ ಸೇರಿದಂತೆ 7 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಬಾಕಿ ಉಳಿದಿವೆ. ರಸ್ತೆ ಮತ್ತು ಇತರ ಸಂಪರ್ಕ ವ್ಯವಸ್ಥೆಯ ಕೊರತೆಯಿಂದಾಗಿ ಸಿಮೆಂಟ್ ವಿದ್ಯುತ್ ಕಂಬಗಳನ್ನು ಸಾಗಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಉಪ ವಿಭಾಗದಿಂದ 79 ಕಬ್ಬಿಣದ ಏಣಿ ಮಾದರಿಯ (ಲ್ಯಾಡರ್) ಕಂಬಗಳನ್ನು ತರಿಸಿಕೊಳ್ಳಲಾಗಿದ್ದು, ಸಾಧ್ಯವಾದ ಪ್ರದೇಶಗಳ ಮೂಲಕ ಈ ಕಂಬಗಳನ್ನು ಹೊತ್ತೊಯ್ದು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.
ವೀರಾಜಪೇಟೆ: ವೀರಾಜಪೇಟೆ ತಾಲೂಕಿನ 43 ಗ್ರಾಮ, ಉಪ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ತೀವ್ರ ಹಾನಿಗೊಳಗಾಗಿದ್ದು, ಈ ಪೈಕಿ ಬಹುತೇಕ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನಿಡಿದರು.
ಜಿಲ್ಲೆಯಲ್ಲಿ ವಿದ್ಯುತ್ ವಿತರಣಾ ಜಾಲದ ಪುನರ್ ಸ್ಥಾಪನೆಗೆ ಕೊಡಗು ವಿಭಾಗದ 385 ನಿರ್ವಹಣಾ ಸಿಬ್ಬಂದಿಗಳಲ್ಲದೆ, ಮೈಸೂರು, ಮಂಡ್ಯ, ಹಾಸನ ವೃತ್ತದಿಂದ ಸುಮಾರು 225 ನಿರ್ವಹಣಾ ಸಿಬ್ಬಂದಿಗಳನ್ನು ಹಾಗೂ ಗುತ್ತಿಗೆ ಏಜೆನ್ಸಿ ಮೂಲಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಶಿವಮೊಗ್ಗದಿಂದ 15 ಮಂದಿ ತಾಂತ್ರಿಕ ಪರಿಣತಿ ಹೊಂದಿದ ಸ್ವಯಂ ಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಮಡಿಕೇರಿ ವಿಭಾಗದ 6 ಲಾರಿ, 5 ಜೀಪುಗಳಲ್ಲದೆ, ಹೆಚ್ಚುವರಿಯಾಗಿ 23 ಪಿಕ್ ಅಪ್ ಜೀಪ್‍ಗಳು, 5 ಲಾರಿ, 2 ಕ್ರೇನ್ ಲಾರಿಗಳನ್ನು ಬೇರೆ ವಿಭಾಗಗಳಿಂದ ತರಿಸಿಕೊಳ್ಳಲಾಗಿದೆ. ಇದರೊಂದಿಗೆ ಅಗತ್ಯಕ್ಕೆ ಅನುಗುಇಣವಾಗಿ ಹೆಚ್ಚುವರಿ ವಾಹನ ಮತ್ತು ಕ್ರೇನ್‍ಗಳನ್ನು ಬಳಸಿಕೊಳ್ಳಲು ಮತ್ತು ಅಗತ್ಯವಿರುವ ಕಂಬಗಳು, ವಿದ್ಯುತ್ ಪರಿವರ್ತಕಗಳು, ವಾಹಕ ಮತ್ತು ಇತರ ವಿದ್ಯುತ್ ಪರಿಕರಗಳನ್ನು ನಿಗಮವು ಬೇಡಿಕೆಗೆ ಅನುಗುಣವಾಗಿ ಒದಗಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಸ್ಥಳೀಯವಾಗಿ ಖರೀದಿಗೂ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಎಇಇ ದೇವಯ್ಯ ತಿಳಿಸಿದರು.







