ಶಿವಮೊಗ್ಗ: ಜಿ.ಪಂ. ಸಾಮಾನ್ಯ ಸಭೆ ನಿರ್ಣಯ ಕಾರ್ಯಗತಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಶಿವಮೊಗ್ಗ, ಆ. 30: ಶಿವಮೊಗ್ಗ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಜಿ.ಪಂ.ನ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನಗೊಳಿಸದಂತೆ ಬುಧವಾರ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆ ಹೊರಡಿಸಿದೆ. ಜೊತೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ನೋಟೀಸ್ ಜಾರಿಗೊಳಿಸಿದೆ.
ಬಿಜೆಪಿ ಸದಸ್ಯ ಸುರೇಶ್ ಬಿ. ಸ್ವಾಮಿರಾವ್‍ರವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವು, ಕೋರಂ ಇಲ್ಲದ ಸಭೆಯಲ್ಲಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ನೇಮಕಗೊಳಿಸುವ ನಿರ್ಣಯ ಅಂಗೀಕರಿಸಿದೆ. ಇದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಬಿ. ವೀರಪ್ಪರವರಿದ್ದ ಹೈಕೋರ್ಟ್ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತ್ತು. ಕೋರಂ ಕೊರತೆಯ ನಡುವೆಯೂ ನಡೆಸಿದ ಮುಂದುವರಿದ ಸಾಮಾನ್ಯ ಸಭೆಯ ನಿರ್ಣಯದ ಬಗ್ಗೆ ಸ್ಪಷ್ಟನೆ ಕೋರಿ ಸಿಇಓ ಕಳುಹಿಸಿದ ಪತ್ರಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ ಕಾರ್ಯದರ್ಶಿ 15 ದಿನದೊಳಗೆ ಉತ್ತರ ಕೊಡಬೇಕಾಗಿತ್ತು. ಆದರೆ ಉತ್ತರ ಕೊಡದಿರುವುದು ಪಂಚಾಯತ್ ರಾಜ್ ಕಾಯ್ದೆ ಸೆಕ್ಷನ್ 180 (2) (ಸಿ), 188 ರ ಉಲ್ಲಂಘನೆಯಾಗಿದೆ ಎಂದು ದೂರುದಾರರು ನ್ಯಾಯಾಲಯದ ಗಮನ ಸೆಳೆದಿದ್ದರು. ಜು. 17 ಮತ್ತು ಜು. 24 ರ ಸಭಾ ತೀರ್ಮಾನ ಹಾಗೂ ಸ್ಥಾಯಿ ಸಮಿತಿ ಚಟುವಟಿಕೆಗೆ ಮಧ್ಯಾಂತರ ತಡೆಯಾಜ್ಞೆ ನೀಡಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ಹೈಡ್ರಾಮ: ಜುಲೈ 17 ರಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಬಿಜೆಪಿಯು ಸ್ಥಾಯಿ ಸಮಿತಿ ಚುನಾವಣೆಗೆ ಪಟ್ಟು ಹಿಡಿದಿತ್ತು. ಗದ್ದಲ ಏರ್ಪಟ್ಟ ಕಾರಣ ಸಭೆ ಮುಂದೂಡಲಾಗಿತ್ತು. ಜು. 24 ರಂದು ಮುಂದುವರಿದ ಸಾಮಾನ್ಯ ಸಭೆ ನಡೆದಿತ್ತು. ಈ ಸಭೆಗೆ ಬಿಜೆಪಿಯ ಇಬ್ಬರು ಸದಸ್ಯರು ಹೊರತುಪಡಿಸಿ, ಉಳಿದವರು ಗೈರು ಹಾಜರಾಗಿದ್ದರು.
ಕೋರಂ ಇಲ್ಲದ ಕಾರಣದಿಂದ ಸಭೆ ಮುಂದೂಡುವಂತೆ ಬಿಜೆಪಿ ಆಗ್ರಹಿಸಿತ್ತು. ಆದರೆ ಪಂಚಾಯತ್ ರಾಜ್ ನಿಯಮಾನುಸಾರ, ಮುಂದುವರಿದ ಸಭೆಗೆ ಕೋರಂ ಅಗತ್ಯವಿಲ್ಲ ಎಂದು ಜೆಡಿಎಸ್-ಕಾಂಗ್ರೆಸ್ ಸದಸ್ಯರು ಹೇಳಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ನಿರ್ಣಯ ಅಂಗೀಕರಿಸಿದ್ದರು. ಈ ನಡುವೆ ಕೋರಂ ಇಲ್ಲದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ಊರ್ಜಿತವೇ ಎಂಬುವುದರ ಬಗ್ಗೆ ಸ್ಪಷ್ಟೀಕರಣ ಕೋರಿ ಸಿಇಓ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಜಿ.ಪಂ. ಕೈಗೊಂಡ ತೀರ್ಮಾನಗಳ ಕುರಿತಂತೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದ ವೇಳೆ, ಪಂಚಾಯತ್ ರಾಜ್ ನಿಯಮಾನುಸಾರ 15 ದಿವಸಗಳೊಳಗೆ ಸರ್ಕಾರದಿಂದ ಉತ್ತರ ಬರಬೇಕು. ಒಂದು ವೇಳೆ ಉತ್ತರ ಬರದಿದ್ದರೆ ಜಿ.ಪಂ. ಕೈಗೊಂಡ ನಿರ್ಣಯವೇ ಊರ್ಜಿತವಾಗಲಿದೆ. ಸಿಇಓರವರು ಸ್ಪಷ್ಟನೆ ಕೋರಿ ಬರೆದಿದ್ದ ಪತ್ರಕ್ಕೆ 23 ದಿನಗಳಾದರೂ ಸರ್ಕಾರದ ಕಡೆಯಿಂದ ಉತ್ತರ ಬಂದಿರಲಿಲ್ಲ.
ಈ ಕಾರಣದಿಂದ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್‍ರವರು ಮೂರು ಸ್ಥಾಯಿ ಸಮಿತಿಗಳಿಗೆ ಮೈತ್ರಿಕೂಟದ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದ್ದರು. ಸಾಮಾಜಿಕ ನ್ಯಾಯ ಸಮಿತಿಗೆ ಜೆಡಿಎಸ್‍ನ ಜೆ.ಪಿ.ಯೋಗೀಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್‍ನ ಭಾರತಿ ಪ್ರಭಾಕರ್ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ನರಸಿಂಗನಾಯ್ಕ್‍ರನ್ನು ಆಯ್ಕೆ ಮಾಡಿದ್ದರು.
ಕೇವಿಯಟ್ ಸಲ್ಲಿಕೆ
ಈ ನಡುವೆ ಬಿಜೆಪಿಯು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಮನಗಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕೂಡ ಕೇವಿಯಟ್ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ವಿಚಾರಣೆಯಲ್ಲಿ ತಮ್ಮ ಅಹವಾಲು ಆಲಿಸುವಂತೆ ನ್ಯಾಯಾಲಯಕ್ಕೆ ಕೋರಿದೆ. ಪ್ರಕರಣದ ವಿಚಾರಣೆ ಯಾವಾಗ ನಡೆಯಲಿದೆ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ
ಬುಧವಾರ ನಗರದ ಜಿ.ಪಂ. ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಸಮಿತಿಗೆ ಅಧ್ಯಕ್ಷ ಜೆಡಿಎಸ್‍ನ ಜೆ.ಪಿ.ಯೋಗೀಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂಗ್ರೆಸ್‍ನ ಭಾರತಿ ಪ್ರಭಾಕರ್ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ನರಸಿಂಗನಾಯ್ಕ್‍ರವರು ಅಧಿಕಾರ ಸ್ವೀಕರಿಸಿದ್ದಾರೆ. ಇವರ ಅಧಿಕಾರ ಸ್ವೀಕರಿಸಿದ ಕೆಲ ಗಂಟೆಗಳ ನಂತರ ಹೈಕೋರ್ಟ್ ಜಿ.ಪಂ. ಸಾಮಾನ್ಯ ಸಭೆಗಳಲ್ಲಿ ಕೈಗೊಂಡ ನಿರ್ಣಯ ಜಾರಿಗೆ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು.







