'ಕಳಂಕ'ಕ್ಕೆ ನೃತ್ಯ ಕಲಿಯುತ್ತಿದ್ದಾರೆ ಆಲಿಯಾ ಭಟ್
ಐತಿಹಾಸಿಕ ಕತೆಯನ್ನು ಹೊಂದಿರುವ ‘ಕಳಂಕ್’ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ನೇನೆ, ಸೋನಾಕ್ಷಿ ಸಿನ್ಹಾ, ಅಲಿಯಾ ಭಟ್, ವರುಣ್ ಧವನ್, ಆದಿತ್ಯ ರಾಯ್ ಕಪೂರ್ ಹಾಗೂ ಸಂಜಯ್ ದತ್ತ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ. ಮೊದಲಿಗೆ ‘ಶಿದ್ದತ್’ ಎಂದು ನಾಮಕರಣ ಮಾಡಲಾಗಿದ್ದ ಈ ಚಿತ್ರ ಯಶ್ ಜೊಹರ್ ಅವರ ಕನಸಿನ ಯೋಜನೆಯಾಗಿದೆ. ಸದ್ಯ ಈ ಚಿತ್ರಕ್ಕಾಗಿ ಆಲಿಯಾ ಭಟ್ ಕಥಕ್ ಕಲಿಯುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಲಿಯಾ ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲು ಮುಂದಾಗಿದ್ದಾರೆ. ಅದರ ಭಾಗವಾಗಿಯೇ ಅವರು ಸದ್ಯ ಕಥಕ್ ಕಲಿಯುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಕಥಕ್ ನೃತ್ಯ ಪಂಡಿತ ಪಂಡಿತ್ ಬಿರ್ಜು ಮಹಾರಾಜ್ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ ಅವರಿಂದ ಈ ನೃತ್ಯದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದರು. ಮಹೇಶ್ ಭಟ್ ಪುತ್ರಿಯಾಗಿರುವ ಆಲಿಯಾ, ಈ ಹಿಂದೆ ಉಡ್ತಾ ಪಂಜಾಬ್, ರಾಝಿ ಮುಂತಾದ ಸಿನೆಮಾಗಳ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ಇದೀಗ ‘ಕಳಂಕ್’ ಸಿನೆಮಾದಲ್ಲೂ ಅವರು ಇದೇ ಮಾದರಿಯ ಛಾಪು ಒತ್ತಲಿದ್ದಾರೆ ಎಂದು ಬಾಲಿವುಡ್ ಪಂಡಿತರು ಅಭಿಪ್ರಾಯಪಡುತ್ತಾರೆ.