ಬೌದ್ಧಿಕ ಶಿಸ್ತು ಬೆಳೆಯಲು ಓದು ಸಹಕಾರಿ: ಡಾ.ಪಾದೆಕಲ್ಲು

ಉಡುಪಿ, ಆ.31: ಸಾಹಿತ್ಯದ ಓದು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಶಿಸ್ತು ಮತ್ತು ಜೀವನ ಪ್ರೀತಿಯನ್ನು ಬೆಳೆಸುತ್ತದೆ. ಪ್ರಾಚೀನ ಸಾಹಿತ್ಯ ಕೃತಿಗಳು ಸಮಕಾಲೀನ ಬದುಕಿನ ಚಿತ್ರಣವನ್ನು ಓದುಗರಿಗೆ ನೀಡುತ್ತವೆ ಎಂದು ಕನ್ನಡದ ಹಿರಿಯ ವಿದ್ವಾಂಸ, ವಿಶ್ರಾಂತ ಪ್ರಾಚಾರ್ಯ ಡಾ.ಪಾದೆಕಲ್ಲು ವಿಷ್ಞು ಭಟ್ ಹೇಳಿದ್ದಾರೆ.
ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಾಹಿತ್ಯ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯ ಪ್ರಕಾರಗಳ ತರ್ಕಶಾಸ್ತ್ರ ಮತ್ತು ವ್ಯಾಕರಣಶಾಸ್ತ್ರಗಳು ಅತ್ಯಮೂಲ್ಯ ಶಾಸ್ತ್ರಗಳಾಗಿದ್ದು, ವ್ಯಾಕರಣಶಾಸ್ತ್ರ ಒಂದು ಶುದ್ಧ ಭಾಷೆಯಲ್ಲಿ ನಮ್ಮ ಅಭಿಪ್ರಾಯ, ವಿಚಾರಗಳ ನಿರೂಪಣೆಗೆ ಆಧಾರವಾಗಿರುತ್ತದೆ. ಅದೇ ರೀತಿಯಲ್ಲಿಯೇ ನಮ್ಮ ವಿಚಾರಗಳನ್ನು ಯೋಜನಾ ಬದ್ಧವಾಗಿ ರಚಿಸಲು ನಮಗೆ ತರ್ಕಶಾಸ್ತ್ರ ಸಹಕಾರಿ ಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ವಹಿಸಿದ್ದರು. ಐಚ್ಛಿಕ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರವಿರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ತ್ರಿವೇಣಿ ವಂದಿಸಿದರು. ಸಹಪ್ರಾಧ್ಯಾಪಕಿ ಸೌವ್ಯು ಲತಾ ಕಾರ್ಯಕ್ರಮ ನಿರೂಪಿಸಿದರು.





