ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ರೈತರು ಕಂಗಾಲು: ಮೋಡ ಬಿತ್ತನೆ ಅನುಮಾನ
ಬೆಂಗಳೂರು, ಆ.31: ರಾಜ್ಯದಲ್ಲಿ ಕೊಡಗು, ಕರಾವಳಿ ಸೇರಿದಂತೆ ಹಲವು ಕಡೆಗಳಲ್ಲಿ ಅಪಾರವಾದ ಮಳೆಯಿಂದಾಗಿ ಅತಿವೃಷ್ಟಿ ಸೃಷ್ಟಿಯಾಗಿದೆ. ಆದರೆ, ಬಯಲು ಸೀಮೆ ಜಿಲ್ಲೆಗಳಲ್ಲಿ ಸರಿಯಾದ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಆದರೂ, ರಾಜ್ಯ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಸರಿಯಾದ ಮಳೆಯಾಗದೆ ಬರಗಾಲವನ್ನು ಎದುರಿಸುತ್ತಿವೆ. ಹೀಗಾಗಿ, ಮೋಡ ಬಿತ್ತನೆ ಮೂಲಕ ರೈತರ ನೆರವಿಗೆ ಸರಕಾರ ಮುಂದಾಗುತ್ತದೆ ಎಂದು ಕಾಯುತ್ತಿದ್ದ ರೈತರಿಗೆ ನಿರಾಸೆಯಾಗಿದ್ದು, ಸರಕಾರ ಈ ಸಂಬಂಧ ಯಾವುದೇ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲು ಮುಂದಾಗಿಲ್ಲ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಯತ್ನಕ್ಕೂ ಆರ್ಥಿಕ ಇಲಾಖೆ ಅಡ್ಡಗಾಲು ಹಾಕಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯ ಜಿಲ್ಲೆಗಳಲ್ಲಿ ಶೇ. 22 ರಿಂದ 30, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ ಶೇ. 60ರಷ್ಟು ಮಳೆ ಕೊರತೆಯಿದೆ ಎಂದು ಅಂದಾಜಿಸಲಾಗಿದೆ. ಸರಕಾರ ಮೋಡ ಬಿತ್ತನೆ ಮೂಲಕ ರೈತರ ಸಂಕಷ್ಟವನ್ನು ನಿವಾರಣೆ ಮಾಡಲು ಮುಂದಾಗುತ್ತದೆ ಎಂದು ನಂಬಿದ್ದರು. ಆದರೆ, ಮುಖ್ಯಮಂತ್ರಿ ರೈತರ ಸಾಲ ಮನ್ನಾ ಮಾಡಿದ್ದರಿಂದ ಮೋಡ ಬಿತ್ತನೆಗೆ ಹಣಕಾಸು ನೀಡಲು ಸಾಧ್ಯವಾಗಲ್ಲ ಎಂದು ಆರ್ಥಿಕ ಇಲಾಖೆ ಹೇಳುತ್ತಿದೆ ಎಂದು ತಿಳಿದುಬಂದಿದೆ.
ಹಿಂದಿನ ಸರಕಾರದ ಅವಧಿಯಲ್ಲಿ ಜೂನ್‌ನಲ್ಲಿ ಮೋಡ ಬಿತ್ತನೆ ಮಾಡುವ ಸಲುವಾಗಿ ಯೋಜನೆ ಸಿದ್ಧ ಮಾಡಿ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸುಮಾರು 72 ದಿನಗಳ ಕಾಲ ವಿವಿಧ ಭಾಗಗಳಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಅದರಿಂದ ಶೇ.29.7ರಷ್ಟು ಮಳೆಯ ಪ್ರಮಾಣ ಹೆಚ್ಚಾಗಿತ್ತು ಎಂದು ತಜ್ಞರು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ, ಪ್ರತಿವರ್ಷ ಮೋಡಬಿತ್ತನೆ ಮಾಡಬಹುದು ಎಂದು ಅಂದಿನ ಸಚಿವರು ಪ್ರಸ್ತಾವವನ್ನು ಸಲ್ಲಿಸಿದ್ದರು. ಇಂದಿನ ಸರಕಾರ ಅದನ್ನು ತಿರಸ್ಕರಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಈ ಬಾರಿಯೂ ಮೋಡ ಬಿತ್ತನೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿತ್ತು. ಅಲ್ಲದೆ, ಈಗಾಗಲೇ ಮುಂಗಾರು ಅಂತ್ಯಗೊಳ್ಳುವ ಸಮಯ ಹತ್ತಿರವಾಗುತ್ತಿದೆ. ಮೋಡ ಬಿತ್ತನೆ ಮಾಡಲು ಟೆಂಡರ್ ಆಹ್ವಾನಿಸಿ, ಅನುಷ್ಠಾನಗೊಳಿಸಲು ಅಂದಾಜು ಒಂದೂವರೆ ತಿಂಗಳು ಬೇಕಿದೆ. ಅನಂತರ ಕೇಂದ್ರ ಸರಕಾರದ ವಿವಿಧ ಇಲಾಖೆಗಳಿಂದ ಒಪ್ಪಿಗೆ ಪಡೆಯಬೇಕು. ಅಷ್ಟರಲ್ಲಿ ಮುಂಗಾರು ಅವಧಿ ಮುಕ್ತಾಯವಾಗುತ್ತದೆ. ಇನ್ನಾದರೂ ಸರಕಾರ ಏನು ಮಾಡುತ್ತದೆ ಎಂದು ಕಾದು ನೋಡಬೇಕಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.







