ಮಾನವನ ಮೆದುಳಿಗೂ ಸೇರುತ್ತಿರುವ ಧೂಳಿನ ಕಣ: ಮಹೇಶ್ ಕಶ್ಯಪ್
ಬೆಂಗಳೂರು, ಆ.31: ಇತ್ತೀಚಿಗೆ ನಡೆದ ಸಂಶೋಧನೆಗಳಲ್ಲಿ ಧೂಳಿನ ಕಣವು ಮಾನವನ ಮೆದುಳಿಗೂ ಸೇರುತ್ತಿರುವುದು ಬೆಳಕಿಗೆ ಬಂದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಮಹೇಶ್ ಕಶ್ಯಪ್ ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಭಾರತೀಯ ವಾಯುಮಾಲಿನ್ಯ ನಿಯಂತ್ರಣ ಸಂಘ (ಐಪಿಸಿಎ) ಆಯೋಜಿಸಿದ್ದ ‘ಏರ್ ಓಥಾನ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಧೂಳಿನ ಕಣಗಳು ಸೂಕ್ಷ್ಮವಾದಷ್ಟೂ ಶರೀರವನ್ನು ಸುಲಭವಾಗಿ ಪ್ರವೇಶಿಸುತ್ತವೆ. ಇತ್ತೀಚೆಗೆ ನಡೆದ ಸಂಶೋಧನೆಗಳಲ್ಲಿ ಪಿಎಂ-10 ಧೂಳಿನ ಕಣವು ಮಾನವನ ಮೆದುಳಿಗೂ ಸೇರುತ್ತಿರುವುದು ತಿಳಿದುಬಂದಿದೆ. ಇದು ಮೆದುಳಿಗೆ ಹಾನಿ ಮಾಡುವ ರೋಗಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮಹೇಶ್ ತಿಮ್ಮಯ್ಯ ಮಾತನಾಡಿ, ಪಿಎಂ-10, ಪಿಎಂ-2.5 ಗಿಂತಲೂ ಅತಿ ಸೂಕ್ಷ್ಮ ಧೂಳಿನ ಕಣವಾದ ಪಿಎಂ-1 ಪರೀಕ್ಷಿಸಲು ಸೂಕ್ತವಾದ ತಂತ್ರಜ್ಞಾನ ಹಾಗೂ ಉಪಕರಣಗಳಿಲ್ಲ ಎಂದು ಅವರು ಹೇಳಿದರು.
ಪಿಎಂ-1 ಎಂಬ ಅತಿ ಸೂಕ್ಷ್ಮ ಧೂಳಿನ ಕಣವು ಮಾನವನ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ಆದರೆ ಇದನ್ನು ಪತ್ತೆ ಮಾಡಲು ದೇಶದಲ್ಲಿ ಸರಿಯಾದ ಉಪಕರಣ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದಾಗ ಈ ಧೂಳಿನ ಕಣದ ಪ್ರಮಾಣವನ್ನು ಪ್ರತಿ ದಿನ ಪರೀಕ್ಷಿಸುವ ಸಾಮರ್ಥ್ಯವನ್ನು ಮಂಡಳಿಗಳು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
ಮಂಡಳಿಯು ನಗರದಲ್ಲಿ ಸ್ಥಾಪಿಸಿರುವ ಮಾಲಿನ್ಯ ಪರೀಕ್ಷಾ ಕೇಂದ್ರಗಳ ಮೂಲಕ ಪಿಎಂ-10, ಪಿಎಂ-2.5, ಕಾರ್ಬನ್ ಮೊದಲಾದ ಮಾಲಿನ್ಯ ಕಾರಕಗಳನ್ನು ನಿತ್ಯ ಪರೀಕ್ಷಿಸಲಾಗುತ್ತಿದೆ. ನ್ಯಾಷನಲ್ ಆ್ಯಂಬಿಯೆಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ಸ್ ನಿಯಮವು 2009 ರಲ್ಲಿ ತಿದ್ದುಪಡಿಯಾದಾಗ ಹೊಸ ಮಾಲಿನ್ಯಕಾರಕಗಳ ಪಟ್ಟಿ ಮಾಡಲಾಯಿತು. ಪಿಎಂ-10, ಪಿಎಂ-2.5 ಧೂಳಿನ ಕಣಗಳ ಹೆಸರನ್ನು ಆಗಲೇ ಪಟ್ಟಿಗೆ ಸೇರಿಸಲಾಯಿತು ಎಂದರು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಲ್ಲ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳು ಪ್ರಮುಖವಾಗಿ 12 ವಾಯು ಮಾಲಿನ್ಯಕಾರಕಗಳ ಪ್ರಮಾಣವನ್ನು ಕಂಡುಹಿಡಿಯುವ ಸಾಮರ್ಥ್ಯ ಹೊಂದಿವೆ. ಆದರೂ, ಬಹುತೇಕ ಮಂಡಳಿಗಳು ಉಪಕರಣ, ತಂತ್ರಜ್ಞಾನದ ಕೊರತೆಯಿಂದ 8 ಮಾಲಿನ್ಯಕಾರಕಗಳ ಪ್ರಮಾಣವನ್ನಷ್ಟೇ ಪರೀಕ್ಷೆ ಮಾಡುತ್ತಿವೆ ಎಂದು ಹೇಳಿದರು.
ಐಪಿಸಿಎ ಉಪ ನಿರ್ದೇಶಕಿ ಡಾ.ರಾಧಾ ಗೋಯಲ್ ಮಾತನಾಡಿ, ಕೆಲ ವರ್ಷಗಳಿಂದ ಮನೆಯ ಒಳಗಿನ ವಾಯುಮಾಲಿನ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಹೊರಗಿನ ವಾಯುಮಾಲಿನ್ಯಕ್ಕಿಂತ ಮನೆಯ ಒಳಗಿನ ಮಾಲಿನ್ಯ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ ಎಂದು ಕಾರ್ಯಾಗಾರದಲ್ಲಿ ವಿಪ್ರಾಸ್ಪರ್ಸ್ ಕಂಪೆನಿಯ ಮುಖ್ಯಸ್ಥ ಪ್ರದೀಪ್ ಮೈಥನಿ, ಐಐಎಸ್‌ಸಿ ವಿಜ್ಞಾನಿ ಪ್ರೊ.ನವಕಾಂತ ಭಟ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.







