ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಕ್ರಮ: ಶಾಸಕ ರಾಜೇಗೌಡ
ಶೃಂಗೇರಿ, ಸೆ.1: ಅತೀವೃಷ್ಟಿ ಉಂಟಾದಾಗ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತಮ ಸ್ಪಂದನೆ ನೀಡಿದ್ದಾರೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುತ್ತಿದ್ದೇವೆ. ಸರಕಾರದಿಂದ ಬರುವ ನೆರೆ ಪರಿಹಾರ ನಿಧಿಯಿಂದ ಜಿಲ್ಲೆಗೆ 25 ಕೋಟಿ ಹಣ ಬಿಡುಗಡೆಯಾಗಿದೆ. ಸಂಬಂಧಪಟ್ಟ ಇಲಾಖೆಗಳ ವರದಿಯನ್ನು ಪರಿಶೀಲಿಸಿ ಪರಿಹಾರ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಅವರು ಶನಿವಾರ ತಾಲೂಕಿನ ಅಡ್ಡಗದ್ದೆ ಸರಕಾರಿ ಪ್ರಥಮಿಕ ಶಾಲೆಯ ವಿದ್ಯಾಭಾರತೀ ಸಭಾಂಗಣದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡ ಅಡ್ಡಗದ್ದೆ ಗ್ರಾ.ಪಂ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ತಿಂಗಳು ಸಭೆ ನಡೆಸಿ ಹಕ್ಕುಪತ್ರ ನೀಡಲಾಗುವುದು. ಸೊಪ್ಪಿನ ಬೆಟ್ಟದಲ್ಲಿ ವಸತಿ ಮತ್ತು ಕೃಷಿ ಮಾಡಿದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದರು.
ಕ್ಷೇತ್ರದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಡಬಾರದು. ಕಾರಣ ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತದ ಜೊತೆಗೆ ಧರೆಕುಸಿತದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದು. ಜನಂಖ್ಯೆಯ ಹೆಚ್ಚಳದಿಂದ ವಸತಿ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಜನಸಾಮಾನ್ಯರು ವಸತಿಗಾಗಿ ಸೊಪ್ಪಿನ ಬೆಟ್ಟ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಕೃಷಿಯನ್ನು ಪ್ರಧಾನ ಉದ್ಯೋಗವಾಗಿಸಿಕೊಂಡ ಕ್ಷೇತ್ರದಲ್ಲಿ ಒತ್ತುವರಿ ಆದ ಪ್ರದೇಶಗಳ ಬಗ್ಗೆ ಕಾನೂನನ್ನು ಬದಿಗಿರಿಸಿ ಜನಸಾಮಾನ್ಯರಿಗಾಗಿ ಹಾಗೂ ಕೃಷಿಕರಿಗಾಗಿ ಇಲಾಖೆ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಕ್ಷೇತ್ರದ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ನ ಕೊಡುಗೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ತಹಶೀಲ್ದಾರ್ ನಾರಾಯಣಕನಕ ರೆಡ್ಡಿ ಮಾತನಾಡಿ, ಅತಿಯಾದ ಮಳೆಯಿಂದ ತರಿ ಜಮೀನಿಗೆ ಬಂದಿರುವ ಮಣ್ಣು ತೆಗೆಯಲು ಒಂದು ಹೆಕ್ಟೇರಿಗೆ ರೂ.12,000 ಪರಿಹಾರಧನ ನೀಡಲಾಗುವುದು. ಮಲೆನಾಡಿನಲ್ಲಿ ಹಲವು ಕಡೆ ಮನೆ ಹಾನಿಯಾಗಿದ್ದು ಧರೆಕುಸಿತವೇ ಮುಖ್ಯಕಾರಣ. ಪರಿಸರವನ್ನು ಉಳಿಸುವುದು ಎಲ್ಲರ ಗುರುತರ ಜವಾಬ್ದಾರಿ. ಹಾನಿಗೊಂಡ ಮನೆಗಳಿಗೆ ಪರಿಹಾರ ನೀಡಲಾಗುವುದು. ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಹಾಳಾದ ರಸ್ತೆ, ಜಮೀನು, ಮನೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದೆ. ರೈತರು ಕೊಳೆರೋಗದಿಂದ ಹಾನಿಯಾದ ತೋಟಗಳ ಕುರಿತು ಈಗಾಗಲೇ ಸುಮಾರು ಎರಡು ಸಾವಿರ ಅರ್ಜಿಗಳು ಬಂದಿವೆ. ಅಗತ್ಯವಾದ ದಾಖಲೆ ಸಹಿತ ಅರ್ಜಿ ಸಲ್ಲಿಸಲು ಕೃಷಿಕರಿಗೆ ಇನ್ನೂ ಅವಕಾಶವಿದೆ. ಪ್ರತಿ ತಿಂಗಳು ತಾಲೂಕು ಕಚೇರಿಯಲ್ಲಿ ಪಿಂಚಣಿ ಅದಾಲತ್ ನಡೆಸಲಾಗಿತ್ತಿದೆ. ತಾಲೂಕಿನಲ್ಲಿ ಕಂದಾಯಭೂಮಿ ಲಭ್ಯವಿದ್ದಲ್ಲಿ ಆಯಾಯ ಗ್ರಾಮಪಂಚಾಯತ್ ಅರ್ಜಿ ಸಲ್ಲಿಸಿದ್ದಲ್ಲಿ ವಸತಿಗಾಗಿ ಸ್ಥಳವನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಅಡ್ಡಗದ್ದೆ ಗ್ರಾ.ಪಂ ಅಧ್ಯಕ್ಷ ಕೆ.ಡಿ.ಸುರೇಶ್ ಮಾತನಾಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕಳೆದ ವರ್ಷ ನಮ್ಮ ಗ್ರಾ.ಪಂ ವ್ಯಾಪ್ತಿಯ ರೂ.22ಲಕ್ಷದ 80 ಸಾವಿರ ರಾಜಧನವು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿದಿದೆ. ಅದನ್ನು ಗ್ರಾ.ಪಂ ಖಾತೆಗೆ ವರ್ಗಾಯಿಸಬೇಕು ಎಂದು ಸಭೆಯಲ್ಲಿ ತಮ್ಮ ಅಹವಾಲನ್ನು ತೋಡಿಕೊಂಡರು.
ಲೋಕೋಪಯೋಗಿ ಇಲಾಖೆಯ ಅಭಿಯಂತರಾದ ಜಯರಾಮ್ ಮಾತನಾಡಿ, ಸರಕಾರದಿಂದ ನೀಡುವ ಮನೆಗಳಿಗೆ ಇಲಾಖೆಯ ವತಿಯಿಂದ ಸಂಗ್ರಹಿಸಿದ ಮರಳು ಖಾಲಿಯಾಗುವ ತನಕ ಆದ್ಯತೆಯ ಮೇರೆಗೆ ನೀಡಲಾಗುವುದು ಎಂದರು.
ಅಡ್ಡಗದ್ದೆ ಸರಕಾರಿ ಶಾಲೆಗೆ ಜಾಗ ಮಂಜೂರಾತಿಯಾಗಿಲ್ಲ. ಭೂದಾನದಲ್ಲಿ ನೀಡಿರುವ ಏಳು ಎಕ್ರೆ ಭೂಮಿಯನ್ನು ಕೂಡಲೇ ಸರ್ವೇ ಮಾಡಿಸಿಕೊಡಬೇಕು ಎಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಭೆಗೆ ತಿಳಿಸಿದರು.
ಜನಸಂಪರ್ಕ ಸಭೆಯನ್ನು ತಾ.ಪಂ ಅಧ್ಯಕ್ಷೆ ಜಯಶೀಲ ಉದ್ಘಾಟಿಸಿದರು.ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದರು.