ಉಚಿತ ನೀರು ಬಳಕೆಗೆ ಮುಂದಾಗಿ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಸೆ.1: ಬಡ-ಸಾಮಾನ್ಯ ವರ್ಗಕ್ಕೆ ತಿಂಗಳಿಗೆ 10 ಸಾವಿರ ಲೀಟರ್ ಕಾವೇರಿ ನೀರನ್ನು ಉಚಿತಾಗಿ ಸರಬರಾಜು ಮಾಡುತ್ತಿದ್ದು, ಇದನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಕರೆ ನೀಡಿದರು.
ಶನಿವಾರ ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿಗಳು ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ಅವರ ಜೀವನಾಧಾರಕ್ಕೆ ಅಗತ್ಯವಾದ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಅದರಡಿ, ಬಡ ಕುಟುಂಬಗಳಿಗೆ ಮಾಸಿಕ ಹತ್ತು ಸಾವಿರ ಲೀಟರ್ ಕಾವೇರಿ ನೀರನ ಉಚಿತ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಕ್ಷೇತ್ರ ವ್ಯಾಪ್ತಿಯ ಬಡ ಸಮುದಾಯದವರಿಗೆ ಮನೆ ನಿರ್ಮಾಣ ಮಾಡಲು 4 ಲಕ್ಷ ರೂ.ಗಳ ಸಹಾಯಧನ ಒದಗಿಸಲಾಗುತ್ತದೆ. ಅದಕ್ಕೆ ಸಂಬಂಧಪಟ್ಟ ಆದೇಶದ ಪ್ರತಿಗಳನ್ನು ಈ ದಿನ ವಿತರಿಸಲಾಗುತ್ತದೆ ಎಂದು ಹೇಳಿದರು.
ಎಂ.ಎಸ್.ಪಾಳ್ಯ ವ್ಯಾಪ್ತಿಯಲ್ಲಿ ರಾಜೀವ್ ಆವಾಸ್ ಯೋಜನೆದಡಿ ಈಗಾಗಲೇ 666 ಮನೆಗಳ ನಿರ್ಮಾಣ ಕೈಗೊಳ್ಳಲಾಗಿದೆ. ಅದರಲ್ಲಿ ಬಹುತೇಕ ಪೂರ್ಣಗೊಂಡಿದೆ. ಉಳಿದವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದ ಅವರು, ಶೌಚಾಲಯ ಇಲ್ಲದ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ತಲಾ 15 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಕೃಷ್ಣಭೈರೇಗೌಡ ಭರವಸೆ ನೀಡಿದರು.
ಈ ವೇಳೆ ನಗರಸಭಾ ಸದಸ್ಯ ವಿ.ವಿ.ಪಾರ್ಥೀಬ್ ರಾಜನ್, ನಾಮ ನಿರ್ದೇಶಿತ ಸದಸ್ಯ ಲಕ್ಷ್ಮೀಹರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಎನ್.ಶ್ರೀನಿವಾಸಯ್ಯ ಸೇರಿ ಪ್ರಮುಖರಿದ್ದರು.







