ಅ.13 ರಿಂದ ಮಂಡ್ಯದಲ್ಲಿ ಆರ್ಮಿ ನೇಮಕಾತಿ ರ‍್ಯಾಲಿ: ಆನ್‍ಲೈನ್ ನೋಂದಣಿ ಆರಂಭ
ಮಂಡ್ಯ, ಸೆ.1: ಭಾರತೀಯ ಸೇನೆಯ ಆರ್ಮಿ ನೇಮಕಾತಿ ರ್ಯಾಲಿಯು ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅ.13 ರಿಂದ 19ರವರೆಗೆ ನಡೆಯಲಿದ್ದು, ಈಗಾಗಲೇ ನೇಮಕಾತಿಗೆ ಸಂಬಂಧಿಸಿದಂತೆ ಆನ್‍ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಭಾರತೀಯ ಸೇನೆಯ ಆರ್ಮಿ ನೇಮಕಾತಿ ವಿಭಾಗದ ನಿರ್ದೇಶಕ ನವರತನ್ ಸಿಬಿಯ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆರ್ಮಿ ನೇಮಕಾತಿ ರ್ಯಾಲಿ ಕುರಿತು ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಆ.28ರಿಂದ ನೇಮಕಾತಿ ರ್ಯಾಲಿಗೆ ನೋಂದಣಿ ಆರಂಭಗೊಂಡಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಪುರ, ಬಳ್ಳಾರಿ, ಹಾಸನ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಭಾರತೀಯ ಸೇನೆಯ www.joinindianarmy.nic.in ವೆಬ್‍ಸೈಟ್‍ನಲ್ಲಿ ನೇಮಕಾತಿಗೆ ಬೇಕಾಗುವ ಶಿಕ್ಷಣ ಅರ್ಹತೆ ಸೇರಿದಂತೆ ಇತರೆ ಮಾಹಿತಿಗಳು ಲಭ್ಯವಿದ್ದು, ಅಭ್ಯರ್ಥಿಗಳು ನೋಂದಣಿ ಮಾಡುವಾಗ ಕಡ್ಡಾಯವಾಗಿ ತಮ್ಮ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಅಲ್ಲದೇ ನೋಂದಣಿಗೆ ಸಂಬಂಧಿಸಿದಂತೆ ಇತರೆ ಮಾಹಿತಿಗೆ ದೂರವಾಣಿ ಸಂಖ್ಯೆ 080-22966517 ಕರೆ ಮಾಡಬಹುದು. ಯಾವುದೇ ಕಾರಣಕ್ಕೂ ನೋಂದಣಿ ಸಮಯಲ್ಲಿ ತಪ್ಪು ಮಾಹಿತಿ ನೀಡಬಾರದು ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳ ದೈಹಿಕ ಫಿಟ್ನೆಸ್ ಪರೀಕ್ಷಿಸಲು 1.6 ಕಿಲೋಮೀಟರ್ ಓಟ ಸೇರಿದಂತೆ ಇತರೆ ದೈಹಿಕ ಫಿಟ್ನೆಸ್ ಪರೀಕ್ಷಿಯನ್ನು ಸ್ವತಂತ್ರ ಅಧಿಕಾರಿಗಳ ತಂಡದಿಂದ ನಡೆಸಲಾಗುತ್ತಿದ್ದು, ಆರ್ಮಿಯ ವೈದ್ಯಕೀಯ ತಂಡದ ವೈದ್ಯರಿಂದ ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ಮಾಪನ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗುತ್ತಾರೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಯಶಸ್ವಿ ಆರ್ಮಿ ರ್ಯಾಲಿ ನಡೆಸಲು ಭಾರತೀಯ ಸೇನೆಯ ನೇಮಕಾತಿ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಸೇನೆಯ ಅಧಿಕಾರಿಗಳ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆಯಾಗಬೇಕು. ರ್ಯಾಲಿ ನಡೆಯುವ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ನೇಮಕಾತಿ ಅಧಿಕಾರಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಬೇಕಾಗುವ ಸೌಲಭ್ಯವನ್ನು ಅಧಿಕಾರಿಗಳು ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಮಂಡ್ಯ ಉಪ ವಿಭಾಗಾಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.