ದಾವಣಗೆರೆ: ಪಾಲಿಕೆ ವಾಲ್ವ್ ಮನ್ ಮೇಲೆ ಹಂದಿ ದಾಳಿ; ಗಂಭೀರ ಗಾಯ
ದಾವಣಗೆರೆ,ಸೆ.01: ಪಾಲಿಕೆಯ ವಾಲ್ವ್ ಮನ್ ಮೇಲೆ ಹಂದಿಯೊಂದು ದಾಳಿ ನಡೆಸಿ, ಆತನ ತೊಡೆ, ಮರ್ಮಾಂಗ ಕಚ್ಚಿ ತೀವ್ರ ಗಾಯಗೊಳಿಸಿದ ಘಟನೆ ಇಲ್ಲಿನ ಜಾಲಿ ನಗರದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಪಾಲಿಕೆ ವಾಲ್ವ್ ಮನ್ ಎಚ್.ಎನ್. ಮಂಜುನಾಥ ಹಂದಿ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ. ವಾಲ್ವ್ ಮನ್ ಮಂಜುನಾಥ ಎಂದಿನಂತೆ ವಿವಿಧ ಬಡಾವಣೆ, ಪ್ರದೇಶಕ್ಕೆ ನೀರು ಬಿಡುವ ಕಾರ್ಯದಲ್ಲಿ ತೊಡಗಿದ್ದರು. ಜಾಲಿ ನಗರದಲ್ಲಿ ನೀರು ಬಿಡಲೆಂದು ವಾಲ್ವ್ ತಿರುವುತ್ತಿದ್ದ ವೇಳೆ ಹಠಾತ್ತನೇ ಮಂಜುನಾಥ ಮೇಲೆ ದಾಳಿ ಮಾಡಿರುವ ಹಂದಿ ಮಂಜುನಾಥ್‍ರ ತೊಡೆ, ಮರ್ಮಾಂಗಕ್ಕೆ ತೀವ್ರವಾಗಿ ಗಾಯಗೊಳಿಸಿದೆ.
ಹಂದಿ ದಾಳಿಯಿಂದ ತೀವ್ರ ರಕ್ತಗಾಯಗಳಾದ ಮಂಜುನಾಥರನ್ನು ತಕ್ಷಣವೇ ಸ್ಥಳೀಯರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ವಾಲ್ವ್ ಮನ್ ಆರೋಗ್ಯವನ್ನು ವಿಚಾರಿಸಲು ಪಾಲಿಕೆಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು ಇತರೆ ಪದಾಧಿಕಾರಿಗಳು ಭೇಟಿ ನೀಡಿದರು. ಸಹೋದ್ಯೋಗಿ ವಾಲ್ವ್ ಮನ್‍ಗಳೂ ಆಸ್ಪತ್ರೆಗೆ ತೆರಳಿ, ಮಂಜುನಾಥ್‍ಗೆ ಧೈರ್ಯ ಹೇಳಿದರು. ಅಧಿಕಾರಿಗಳು ಇನ್ನಾದರೂ ಹಂದಿಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಲಿ ಎಂಬ ಒತ್ತಾಯ ಕೇಳಿ ಬಂದಿತು.