ಬೀದಿ ವ್ಯಾಪಾರಿಗಳ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಶಿವಾಜಿನಗರದಲ್ಲಿ ಬಿಗುವಿನ ವಾತಾವರಣ
ಬಂದ್ ಎಚ್ಚರಿಕೆ

ಬೆಂಗಳೂರು, ಸೆ.1: ಬೀದಿ ಬದಿ ವ್ಯಾಪಾರಿಗಳ ಮೇಲೆ ಸಂಚಾರ ಪೊಲೀಸರು ದೌರ್ಜನ್ಯವೆಸಗಿರುವ ಆರೋಪ ಕೇಳಿಬರುತ್ತಿದ್ದಂತೆಯೇ ಶನಿವಾರ ಶಿವಾಜಿನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಗರದ ವಾರ್ಡ್ ಸಂಖ್ಯೆ 61, 62 ಹಾಗೂ 110ರ ಚರ್ಚ್ ಸುತ್ತಲೂ ಶನಿವಾರ ಏಕಾಏಕಿ ಸಂಚಾರ ಪೊಲೀಸರು ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ, ವಿರೋಧ ವ್ಯಕ್ತಪಡಿಸಿದಾಗ ಸಂಚಾರ ಪೊಲೀಸ್ ಅಧಿಕಾರಿ ಎಡ್ವಿನ್, ಕೆಲವರ ಮೇಲೆ ಹಲ್ಲೆ ನಡೆಸಿದಾಗ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.
ತದನಂತರ, ಬಿಬಿಎಂಪಿ ಸದಸ್ಯರ ಆಪ್ತರು ಸ್ಥಳಕ್ಕೆ ಬಂದಾಗ, ಅವರ ಮೇಲೆಯೂ ಎಡ್ವಿನ್ ಹಲ್ಲೆ ನಡೆಸಿದರು ಎನ್ನಲಾಗಿದೆ. ಇದಾದ ಬಳಿಕ, ಜಮಾಯಿಸಿದ ಬೀದಿ ವ್ಯಾಪಾರಿಗಳು ಶಿವಾಜಿನಗರ ಪೊಲೀಸ್ ಠಾಣೆ ಆವರಣದಲ್ಲಿ ಕುಳಿತು ಪ್ರತಿಭಟನಾ ಧರಣಿಗೆ ಮುಂದಾದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟಗಾರ ಲಯನ್ ಬಾಲಕೃಷ್ಣ, ಶಿವಾಜಿನಗರದ ಪ್ರಸಿದ್ಧ ಚರ್ಚ್‌ನಲ್ಲಿ ಇದೇ ತಿಂಗಳ 20ರವರೆಗೂ ಸೆಂಟ್ ಮೇರಿ ಫೆಸ್ಟ್ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಿದ್ದು, ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲದೆ, ಈ ಅವಧಿಯಲ್ಲಿ ಚರ್ಚ್ ಸುತ್ತಲೂ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ನಡೆಸಬಹುದಾಗಿದೆ. ಆದರೆ, ಇಲ್ಲಿನ ಸಂಚಾರ ಪೊಲೀಸರು, ಉದ್ದೇಶಪೂರ್ವಕವಾಗಿ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದಲ್ಲದೆ, ಹಲ್ಲೆ ನಡೆಸಿದ್ದಾರೆ. ಹೀಗಾಗಿ, ಠಾಣೆಯ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹಲ್ಲೆ: ಸಂಚಾರ ಪೊಲೀಸ್ ಅಧಿಕಾರಿ ಎಡ್ವಿನ್, ಕಾಂಗ್ರೆಸ್ ಕಾರ್ಯಕರ್ತರಾದ ಸತೀಶ್, ಸಾದಿಕ್ ಮೇಲೆ ಹಲ್ಲೆ ನಡೆಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರು.
ಈ ಕೂಡಲೇ ಪೊಲೀಸ್ ಅಧಿಕಾರಿ ಎಡ್ವಿನ್ ಎಂಬುವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ, ಸೋಮವಾರ ಶಿವಾಜಿನಗರ ಬಂದ್‌ಗೆ ಕರೆ ನೀಡುವುದಾಗಿ ಬೀದಿಬದಿ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.







