ವೀಸಾಗಳಿಗಾಗಿ ನಕಲಿ ದಾಖಲೆ: ಅಮೆರಿಕದ ಭಾರತೀಯ ಸಿಇಒ ಬಂಧನ

ನ್ಯೂಯಾರ್ಕ್, ಸೆ. 1: 200ಕ್ಕೂ ಅಧಿಕ ವಿದೇಶಿ ಉದ್ಯೋಗಿಗಳಿಗೆ ಎಚ್-1ಬಿ ಮುಂತಾದ ವೀಸಾಗಳನ್ನು ದೊರಕಿಸಿಕೊಡಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದಲ್ಲಿ ಅಮೆರಿಕದ ಎರಡು ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ.
ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನವೊಂದರಿಂದ ಇಳಿದ 49 ವರ್ಷದ ಪ್ರದ್ಯುಮ್ನ ಕುಮಾರ್ ಸಮಲ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಈ ವರ್ಷದ ಎಪ್ರಿಲ್‌ನಲ್ಲಿ ಆತ ಅಮೆರಿಕದಿಂದ ಪರಾರಿಯಾದ ಕೂಡಲೇ ಅವನ ವಿರುದ್ಧ ವೀಸಾ ವಂಚನೆ ದೂರು ದಾಖಲಿಸಲಾಗಿತ್ತು. ತನಿಖೆ ನಡೆಯುತ್ತಿದ್ದಾಗಲೇ ಅವನು ಅಮೆರಿಕದಿಂದ ಪರಾರಿಯಾಗಿದ್ದನು. ಆತ ಈ ವಾರದವರೆಗೂ ಅಮೆರಿಕದಿಂದ ಹೊರಗುಳಿದಿದ್ದ.
ವಿದೇಶಿ ಉದ್ಯೋಗಿಗಳನ್ನು ಶೋಷಿಸುವ, ಮಾರುಕಟ್ಟೆಯಲ್ಲಿ ಕಾನೂನುಬಾಹಿರವಾಗಿ ಸ್ಪರ್ಧಿಸುವ ಹಾಗೂ ಅಮೆರಿಕ ಸರಕಾರವನ್ನು ವಂಚಿಸುವ ಕೃತ್ಯಗಳಲ್ಲಿ 2010 ಮತ್ತು 2011ರಲ್ಲಿ ವಾಶಿಂಗ್ಟನ್‌ನಲ್ಲಿ ಸ್ಥಾಪನೆಗೊಂಡ ಎರಡು ಕಂಪೆನಿಗಳು ಹೇಗೆ ತೊಡಗಿಕೊಂಡಿದ್ದವು ಎಂಬುದನ್ನು ಕ್ರಿಮಿನಲ್ ದೂರಿನಲ್ಲಿ ವಿವರಿಸಲಾಗಿದೆ.
ಸಿಯಾಟಲ್ ಸಮೀಪದ ಬೆಲ್‌ವ್ಯೆನಲ್ಲಿರುವ ‘ದಿವೆನ್ಸಿ’ ಮತ್ತು ‘ಅಝಿಮೆಟ್ರಿ’ ಕಂಪೆನಿಗಳಲ್ಲಿ ಆತ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದನು.
ನಕಲಿ ಮತ್ತು ಸುಳ್ಳು ಅರ್ಜಿಗಳನ್ನು ಅಮೆರಿಕ ಸರಕಾರಕ್ಕೆ ಸಲ್ಲಿಸುವಂತೆ ಸಮಲ್ ತನ್ನ ಉದ್ಯೋಗಿಗಳಿಗೆ ನಿರ್ದೇಶನ ನೀಡುತ್ತಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.







