ತುಮಕೂರು: ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆ ಉದ್ಘಾಟನೆ

ತುಮಕೂರು,ಸೆ.1: ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುಮಕೂರು ಶಾಖೆಯನ್ನು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ. ಅವರು ಇಂದು ಉದ್ಘಾಟಿಸಿದರು.
ತುಮಕೂರು ನಗರದಲ್ಲಿರುವ ತುಮಕೂರು ಪ್ರಧಾನ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕೇವಲ ಝೀರೋ ಬ್ಯಾಲೆನ್ಸ್ ನಲ್ಲಿ ಖಾತೆಗಳನ್ನು ತೆರೆಯುವುದಕ್ಕೆ ಸೀಮಿತವಾಗದೆ, ಪಿಂಚಣಿ, ನರೇಗಾ ಕೂಲಿ ಪಾವತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯುವುದರ ಮೂಲಕ ಸದಾ ಕಾರ್ಯಾಚರಣೆಯಲ್ಲಿ ಖಾತೆಯನ್ನು ಇರುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ರೈತರು, ಕಟ್ಟಡ ಕಾರ್ಮಿಕರು, ರೈತ ಕಾರ್ಮಿಕರು ಸೇರಿದಂತೆ ಕಟ್ಟ ಕಡೆಯ ವ್ಯಕ್ತಿಯು ಒಂದು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂಬುದು ಪ್ರಧಾನ ಮಂತ್ರಿಗಳ ಆಶಯವಾಗಿದೆ. ಅದರಂತೆ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಜನರಿಗೆ ಒದಗಿಸಲಾಗುತ್ತಿದೆ. ಸದಾ ಜನರೊಂದಿಗೆ ನೇರವಾಗಿ ಮುಖಾಮುಖಿಯಾಗುವ ಅಂಚೆ ಇಲಾಖೆಯು ಬ್ಯಾಂಕಿಂಗ್ ಸೌಕರ್ಯವನ್ನು ಕಲ್ಪಿಸುತ್ತಿರುವುದರಿಂದ ಸಂಪೂರ್ಣ ಯಶಸ್ಸು ಸಿಗಲಿದೆ ಎಂದು ತಿಳಿಸಿದರು.
ಅಂಚೆ ಇಲಾಖೆಯ ಬ್ಯಾಂಕ್‍ಗಳು ಸರಕಾರದ ವಿವಿಧ ಸೌಲಭ್ಯ ಯೋಜನೆಗಳನ್ನು ತಮ್ಮ ಬ್ಯಾಂಕ್‍ಗಳ ಮೂಲಕ ಅನುಷ್ಟಾನಗೊಳಿಸುವಂತೆ ಜಿಲ್ಲಾಡಳಿತವನ್ನು ಸಂಪರ್ಕಿಸಿ ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಕಾರ್ಯೋನ್ಮುಖವಾಗುವಂತೆ ಅಂಚೆಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಐಸಿಬಿಪಿ ಬ್ಯಾಂಕಿನಲ್ಲಿ ಖಾತೆ ತೆರೆದ ವಿರೂಪಾಕ್ಷಪ್ಪ, ರಶ್ಮಿತಾ, ಸಿದ್ದಗಂಗಮ್ಮ, ರಂಗಸ್ವಾಮಿ ಹಾಗೂ ಸಹನ ಇವರಿಗೆ ಕ್ಯೂಆರ್ ಕಾರ್ಡ್‍ಗಳನ್ನು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ಇದೇ ಸಂದರ್ಭ ವಿತರಿಸಿದರು.
ನವದೆಹಲಿಯ ತಾಲ್ ಕಟೋರ್ ಮೈದಾನದಲ್ಲಿ ನಡೆದ ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‍ನ ಉದ್ಘಾಟಿಸಿದ ಪ್ರಧಾನಿ ಮೋದಿಯವರ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಯ ವ್ಯವಸ್ಥೆಯನ್ನು ತುಮಕೂರು ಅಂಚೆ ಇಲಾಖೆಯಿಂದ ಮಾಡಲಾಗಿತ್ತು. ಈ ನೇರ ಪ್ರಸಾರವನ್ನು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ. ಅವರು ತುಮಕೂರು ಅಂಚೆ ಇಲಾಖೆಯ ಅಧೀಕ್ಷಕ ವಿ.ಆರ್.ಸ್ವಾಮಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿಯಾಲಿಜ್ಹ ಜೋಸ್ ಅವರೊಂದಿಗೆ ಕೆಲವೊತ್ತು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಹೆಚ್.ಎನ್.ಗಣೇಶ್,ಮಾರುಕಟ್ಟೆ ಎಕ್ಸಿಕ್ಯೂಟೀವ್ ಕೆ.ವಿ.ವೆಂಕಟೇಶ್ ಮತ್ತಿತರರು ಹಾಜರಿದ್ದರು.







